ಅವೈಜ್ಞಾನಿಕ ಜಾತಿ ಜನಗಣತಿ ವಿರೋಧಿಸಿ ಹಾಗೂ ಸಿಇಟಿ ಕೇಂದ್ರದಲ್ಲಿ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗೆ ಅಪಮಾನ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕೆ.ಆರ್.ಪೇಟೆಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅಶೋಕ್ ಅವರಿಗೆ ಮನವಿ ಸಲ್ಲಿಸಲಾಯಿತು. ಅರವಿಂದ್ ಕಾರಂತ್ ಇತರರು ಇದ್ದರು. 
ಜಿಲ್ಲೆ

ಕೆ.ಆರ್.ಪೇಟೆಯಲ್ಲಿ ಬ್ರಾಹ್ಮಣ ಸಮುದಾಯ ಆಕ್ರೋಶ

ಮಾದೇಶ್ ತಿ.ನರಸೀಪುರ

ಕೆ. ಆರ್.ಪೇಟೆ: ಅವೈಜ್ಞಾನಿಕ ಜಾತಿ ಜನಗಣತಿ ವಿರೋಧಿಸಿ ಹಾಗೂ ಸಿಇಟಿ ಕೇಂದ್ರದಲ್ಲಿ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗೆ ಅಪಮಾನ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅಖಿಲ ಭಾರತ ಬ್ರಾಹ್ಮಣ ಮಹಾಸಭಾದ ಕೃಷ್ಣರಾಜಪೇಟೆ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರತಿಭಟನೆ ನಡೆಸಿದರು.

ಪಟ್ಟಣದ ಎಂ. ಕೆ.ಬೊಮ್ಮೆಗೌಡ ವೃತ್ತದಿಂದ ಮೆರವಣಿಗೆ ಆರಂಭಿಸಿದ ಬ್ರಾಹ್ಮಣ ಸಮಾಜದ ಜನರು ಅವೈಜ್ಞಾನಿಕ ಜಾತಿ ಜನಗಣತಿ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರಲ್ಲದೆ ಸಿಇಟಿ ಕೇಂದ್ರದಲ್ಲಿ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳ ಜನಿವಾರ ಬಿಚ್ಚಿಸಿ ಅಪಮಾನ ಮಾಡಿರುವ ಸಿಇಟಿ ಕೇಂದ್ರದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಕೆ.ಆರ್.ಪೇಟೆ ತಾಲೂಕು ಆಡಳಿತ ಕಾರ್ಯ ಸೌಧದ ಬಳಿ ಜಮಾಯಿಸಿದ ಬ್ರಾಹ್ಮಣ ಸಮಾಜ ಜನರು, ವಿದ್ಯಾರ್ಥಿಗಳು ಹಾಗೂ ಮಹಿಳೆಯರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೆ.ಆರ್.ಪೇಟೆ ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಅರವಿಂದ್ ಕಾರಂತ್ ಮಾತನಾಡಿ, ಸಿಇಟಿ ಕೇಂದ್ರದಲ್ಲಿ ಅಧಿಕಾರಿಗಳು ಬ್ರಾಹ್ಮಣ ಸಮಾಜದ ವಿದ್ಯಾರ್ಥಿಯ ಜನಿವಾರ ತೆಗೆಸಿ ಅಪಮಾನ ಮಾಡಿರುವುದಲ್ಲದೆ ವಿದ್ಯಾರ್ಥಿಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಮಾಡಿದ್ದಾರೆ. ರಾಜ್ಯ ಸರ್ಕಾರ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗೆ ತೊಂದರೆಯಾಗಿದ್ದರೂ ಸಂಬಂಧಿಸಿದ ಅಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೆ ಬೇಜವಾಬ್ದಾರಿತನವನ್ನು ವಹಿಸಿರುವುದು ಖಂಡನಿಯ ಎಂದು ಹೇಳಿದರು.

ಅವೈಜ್ಞಾನಿಕ ಜಾತಿ ಜನಗಣತಿ ವರದಿಯನ್ನು ಒಪ್ಪಿ ಜಾರಿಗೊಳಿಸಲು ಮುಂದಾಗಿರುವ ಮುಖ್ಯಮಂತ್ರಿ ಹಾಗೂ ರಾಜ್ಯಸರ್ಕಾರ ಬ್ರಾಹ್ಮಣರ ಜೀವನದ ಜತೆ ಚೆಲ್ಲಾಟವಾಡುತ್ತಿದೆ. ರಾಜ್ಯ ಸರ್ಕಾರ ಕೂಡಲೇ ಅವೈಜ್ಞಾನಿಕ ಜಾತಿ ಜನಗಣತಿಯನ್ನು ತಿರಸ್ಕರಿಸಿ ಹೊಸದಾಗಿ ಜಾತಿ ಜನಗಣತಿ ಮಾಡಿ ಎಲ್ಲ ಜಾತಿಗಳು ಹಾಗೂ ವರ್ಗಗಳಿಗೆ ಸಾಮಾಜಿಕ ನ್ಯಾಯವನ್ನು ನೀಡಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಮಹಾಸಭಾದ ಮಾಜಿ ಅಧ್ಯಕ್ಷ ವಕೀಲ ಜಿ.ಆರ್. ಅನಂತರಾಮಯ್ಯ, ಉಪಾಧ್ಯಕ್ಷ ರಘುರಾಮ ನಾಡಿಗ್, ಕಾರ್ಯದರ್ಶಿ ಸುಬ್ರಮಣ್ಯ, ಖಜಾಂಚಿ ಬ್ಯಾಟರಿಶಾಪ್ ಸುಬ್ಬಣ್ಣ, ಮೋದೂರು ಶ್ರೀಧರ್, ಸವಿತಾ, ಒಕ್ಕಲಿಗ ಸಮಾಜದ ಮುಖಂಡ ನಾಟನಹಳ್ಳಿ ಗಂಗಾಧರ್, ದಲಿತ ಸಮಾಜದ ಮುಖಂಡ, ಜಿಪಂ ಮಾಜಿ ಸದಸ್ಯ ಡಾ.ಎಸ್.ಕೃಷ್ಣಮೂರ್ತಿ ಇತರರು ಇದ್ದರು. ತಹಸೀಲ್ದಾರ್ ಡಾ.ಅಶೋಕ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.