ಕುಂದಾಪುರ: ಹಕ್ಲಾಡಿ ಗ್ರಾಮ ಪಂಚಾಯಿತಿ ಬ್ರಹ್ಮೇರಿ ಕೊರಗ ಕಾಲನಿಗೆ ಉಡುಪಿ ಐಟಿಡಿಪಿ ಹಾಗೂ ಕುಂದಾಪುರ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಆಲಿಸಿ, ಪರಿಹರಿಸುವ ಭರವಸೆ ನೀಡಿದ್ದಾರೆ.
ಬ್ರಹ್ಮೇರಿ ಕೊರಗ ಕಾಲನಿಗೆ ಗುರುವಾರ ಭೇಟಿ ನೀಡಿದ ಅಧಿಕಾರಿಗಳು ಕೊರಗರ ಸಮಸ್ಯೆ ಆಲಿಸಿ, ಪರಿಹಾರಕ್ಕೆ ಮುಂದಾಗಿದ್ದು, ಕಾಲನಿ ವಾಸಿಗಳು ತಾವು ಅನುಭವಿಸುತ್ತಿರುವ ನೀರಿನ ಸಮಸ್ಯೆ, ಶಿಥಿಲ ಮನೆ, ಹಕ್ಕುಪತ್ರ ಇಲ್ಲದಿರುವುದು, ವಾಸ್ತವ್ಯಕ್ಕೆ ಮತ್ತೊಂದು ಮನೆಯ ಅವಶ್ಯಕತೆ ಬಗ್ಗೆ ಅಳಲು ತೋಡಿಕೊಂಡರು.
ಕೊಳವೆ ಬಾವಿ ಕೇಸಿಂಗ್ ಪೈಪ್ ಬದಲಾಯಿಸಿ, ಮೋಟಾರ್ ಅಳವಡಿಸಿ ಹತ್ತು ದಿನದೊಳಗೆ ಸಮಸ್ಯೆ ಪರಿಹಾರ ಮಾಡಲಾಗುತ್ತದೆ. ಕೃಷಿ ಉದ್ದೇಶದ ಮತ್ತೊಂದು ಕೊಳವೆ ಬಾವಿಗೆ ಹಕ್ಲಾಡಿ ಗ್ರಾಮ ಪಂಚಾಯಿತಿ ಕ್ರಿಯಾಯೋಜನೆ ರೂಪಿಸಿ, ಅನುದಾನ ನೀಡಲಾಗುತ್ತದೆ. ಗುತ್ತಿಗೆದಾರರನ್ನು ಸಂಪರ್ಕಿಸಿ ಮನೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಐಟಿಡಿಪಿ ಅಧಿಕಾರಿ ಅನಿತಾ ವಿ. ಮಡ್ಲೂರು ಹೇಳಿದರು.
ಉಡುಪಿ ಐಟಿಡಿಪಿ ಅಧಿಕಾರಿ ಅನಿತಾ ವಿ.ಮಡ್ಲೂರು, ವಿಶ್ವನಾಥ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಘವೇಂದ್ರ ವರ್ಣೇಕರ್, ಮ್ಯಾನೇಜರ್ ರಮೇಶ್ ಕುಲಾಲ್, ಹಕ್ಲಾಡಿ ಗ್ರಾಪಂ ಪಿಡಿಒ ಚಂದ್ರ ಬಿಲ್ಲವ ಇದ್ದರು.
ಬ್ರಹ್ಮೇರಿ ಕೊರಗ ಕಾಲನಿ ಕುರಿತು ಮಂಗಳವಾರ ವಿಜಯವಾಣಿ ‘ಕೊರಗ ಕಾಲಿನಿಗಿಲ್ಲ ಶುದ್ಧ ಕುಡಿಯುವ ನೀರು’ ಎಂಬ ತಲೆಬರಹದಲ್ಲಿ ವಿಸ್ತೃತ ವರದಿ ಪ್ರಕಟಿಸಿತ್ತು.
ಜಿಲ್ಲೆಯಲ್ಲಿ 2 ಲಕ್ಷ ರೂ. ಅನುದಾನದಲ್ಲಿ ಅರ್ಧಕ್ಕೆ ನಿಂತ 183 ಮನೆಗಳಿಗೆ 3.40 ಲಕ್ಷ ರೂ. ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದು, ಹಣ ಮಂಜೂರಾದ ತಕ್ಷಣ ಅರ್ಧಕ್ಕೆ ನಿಂತ ಮನೆ ಪೂರ್ಣ ಮಾಡಲಾಗುತ್ತದೆ. ಕಾಲನಿಯಲ್ಲಿ ಮೂವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿದ್ದು, ಅವರಿಗೆ ಶೈಕ್ಷಣಿಕ ಪ್ರೋತ್ಸಾಹದ ದೃಷ್ಟಿಯಲ್ಲಿ 10 ಸಾವಿರ ರೂ. ವಿದ್ಯಾರ್ಥಿ ವೇತನ ನೀಡಲು ಅರ್ಜಿ ಸಲ್ಲಿಸಲು ಸೂಚಿಲಾಗಿದೆ. ಕೃಷಿ ಉದ್ದೇಶಕ್ಕಾಗಿ ಕಾಲನಿಗೆ ಮತ್ತೊಂದು ಕೊಳವೆ ಬಾವಿ ಕೊರೆಯಲಾಗುತ್ತದೆ. ಕಾಲನಿ ಅಂಗವಿಕಲ ಮಗುವಿಗೆ ಉನ್ನತ ಆಸ್ಪತ್ರೆಯಲ್ಲಿ ಚಿಕಿತ್ಸೆ ವೆಚ್ಚ ಐಟಿಡಿಪಿ ಭರಿಸಲಿದೆ. ಮಹಿಳೆಗೆ ಐಟಿಡಿಪಿ ಮೂಲಕ ಮನೆ ಮಂಜೂರು ಮಾಡಲಾಗುತ್ತಿದ್ದು, ಕಾಲನಿ ಅತ್ಯಂತ ಸ್ವಚ್ಛವಾಗಿದ್ದು, ಪಾಲಕರು ಅವಿದ್ಯಾವಂತರಾದರೂ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರುವುದು ಸೃಜನಾತ್ಮಕ ಬೆಳವಣಿಗೆ.
ಅನಿತಾ ವಿ.ಮಡ್ಲೂರು, ಐಟಿಡಿಪಿ ಅಧಿಕಾರಿ, ಉಡುಪಿ
ಕಾಲನಿ ಕೊಳವೆ ಬಾವಿ ನೀರು ಕುಡಿಯಲು ಯೋಗ್ಯವೇ ಎಂದು ಪರೀಕ್ಷೆ ಮಾಡಿಸಲಾಗುತ್ತದೆ. ಕಾಲನಿ ಬೇಡಿಕೆಯಾದ ಮತ್ತೊಂದು ಮನೆ ನೀಡುವಂತೆ ಐಟಿಡಿಪಿ ಇಲಾಖೆಗೆ ಕೇಳಿಕೊಳ್ಳಲಾಗುತ್ತದೆ. ಕೊಳವೆಬಾವಿ ಕೇಸಿಂಗ್ ಪೈಪ್ ಬದಲಾಯಿಸಿ ಮೋಟಾರ್ ಅಳವಡಿಸಿ, ಕುಡಿಯುವ ನೀರು ಸಮಸ್ಯೆ ಪರಿಹರಿಸಲಾಗುತ್ತದೆ.
ರಾಘವೇಂದ್ರ ವರ್ಣೇಕರ್, ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆ, ಕುಂದಾಪುರ