ಹೊನ್ನಾವರ: ಬ್ರಹ್ಮಶ್ರೀ ನಾರಾಯಣಗುರುಗಳ ಸಂದೇಶ ಪ್ರತಿಯೊಬ್ಬರ ಜೀವನದಲ್ಲಿ ಬದಲಾವಣೆ ಗಾಳಿ ಬೀಸುವಂತಹದ್ದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿನ ದುರ್ಬಲರು ಮುಖ್ಯವಾಹಿನಿಗೆ ಬರಬೇಕು, ಒಟ್ಟಾಗಿ ಬಾಳಬೇಕು ಎನ್ನುವುದು ಗುರುಗಳ ಉದ್ದೇಶವಾಗಿತ್ತು. ಶಿಕ್ಷಣ ಕಲಿತು ಸಮಾಜಸೇವೆ ಮಾಡಿ ಎಂದು ಸಾರಿದರು. ಅವರ ತತ್ವಾದರ್ಶ ಪ್ರಪಂಚಕ್ಕೆ ಮಾದರಿಯಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ರಾಜು ಮೋಗವೀರ ಮಾತನಾಡಿ, ನಾರಾಯಣ ಗುರುಗಳು ಸ್ವಾಭಿಮಾನ, ಆತ್ಮ ಜಾಗೃತಿ ಮೂಡಿಸಿ ಇತರರಿಗೆ ಹೇಗೆ ಮಾದರಿ ಆಗಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ರಾಷ್ಟ್ರೀಯ ಆರ್ಯ-ಈಡಿಗ-ಬಿಲ್ಲವ ಮಂಡಳಿ ಜಿಲ್ಲಾಧ್ಯಕ್ಷ ವೀರಭದ್ರ ನಾಯ್ಕ ಮಾತನಾಡಿ, ನಾರಾಯಣ ಗುರುಗಳಿಲ್ಲದಿದ್ದರೆ ಮೌಢ್ಯ, ಕಂದಾಚಾರಗಳು ತೊಡೆದು ಹೋಗುತ್ತಿರಲಿಲ್ಲ. ಕಾರವಾರದ ರವೀಂದ್ರನಾಥ ಟ್ಯಾಗೋರ್ ಬೀಚ್‌ನಲ್ಲಿ ನಾರಾಯಣ ಗುರುಗಳ ಪ್ರತಿಮೆ ನಿರ್ಮಿಸಬೇಕು ಎಂದು ವಿನಂತಿಸಿದರು.
ನಾಮಧಾರಿ ಅಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ ನಾಯ್ಕ, ಧನಂಜಯ ನಾಯ್ಕ ಮಾತನಾಡಿದರು. ಪತ್ರಕರ್ತ ಕನ್ನೇಶ್ ನಾಯ್ಕ ಉಪನ್ಯಾಸ ನೀಡಿದರು. ಭಟ್ಕಳ ಉಪವಿಭಾಗಾಧಿಕಾರಿ ಡಾ. ನಯನಾ, ತಹಸೀಲ್ದಾರ್ ರವಿರಾಜ ದೀಕ್ಷಿತ್, ತಾಪಂ ಇಒ ಸುರೇಶ ನಾಯ್ಕ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ರಾಮಚಂದ್ರ ಸ್ವಾಗತಿಸಿದರು. ಸುಧೀಶ್ ನಾಯ್ಕ ನಿರ್ವಹಿಸಿದರು.