ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಅಭಿಪ್ರಾಯ
ಬ್ರಹ್ಮಶ್ರೀಗಳ 171ನೇ ಜಯಂತಿ ಉದ್ಘಾಟನೆ
ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವ ಸಂದೇಶ ನೀಡುವ ಮೂಲಕ ಜಾತಿ-ಮತ, ಮೇಲು-ಕೀಳು ಭೇದ ಮರೆಸಿ, ದನಿಯಿಲ್ಲದವರ ದನಿಯಾದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ಶಕ್ತಿ ಇಲ್ಲದವರಿಗೆ ಆತ್ಮವಿಶ್ವಾಸದ ಶಕ್ತಿ ನೀಡಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರೇಪಿಸಿದ ಗುರುಗಳ ಆದರ್ಶ ಜೀವನ ಮಾದರಿಯಾಗಿದೆ ಎಂದು ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಅಭಿಪ್ರಾಯಪಟ್ಟರು.
ಉಡುಪಿಯ ಮಣಿಪುರದ ನಾರಾಯಣ ಗುರು ಸಭಾಭವನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘ ಮಣಿಪುರದ ವತಿಯಿಂದ ಸೆಪ್ಟೆಂಬರ್ 7ರಂದು ಬೆಳಗ್ಗೆ ಆಯೋಜಿಸಿದ್ದ ಗುರುಗಳ 171ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಘರ್ಷದ ಬದುಕು
ಗುರುಗಳು ಆ ಕಾಲಘಟ್ಟದಲ್ಲಿ ರಾತ್ರಿ ಶಾಲೆ ನಡೆಸಿ, ಸಾವಿರಾರು ಜನರಿಗೆ ಉದ್ಯೋಗ ದೊರಕಿಸಿಕೊಟ್ಟ ಮಹನೀಯರು. ದೇವಸ್ಥಾನಗಳಿಗೆ ಪ್ರವೇಶ ಇಲ್ಲದ ಕಾಲದಲ್ಲಿ ಕುದ್ರೋಳಿಯಲ್ಲಿ ಶಿವನನ್ನು ಪ್ರತಿಷ್ಠಾಪಿಸಿ ದಮನಿತ, ಶೋಷಿತ ವರ್ಗಗಳಿಗೆ ದೇಗುಲ ಪ್ರವೇಶ ದೊರಕಿಸಿಕೊಟ್ಟರು. ಬುದ್ಧ, ಬಸವಣ್ಣನಂತೆ ಅವರ ಸಂಘರ್ಷದ ಬದುಕಿನ ಸಾರ ತಿಳಿಸಲು ಇಂತಹ ಕಾರ್ಯಕ್ರಮ ಸಹಕಾರಿ ಎಂದು ಗುರ್ಮೆ ಶೆಟ್ಟಿ ತಿಳಿಸಿದರು.
ನಮಗಿದೆ ಜವಾಬ್ದಾರಿ
ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಾತನಾಡಿ, ಹಬ್ಬದ ಮಾದರಿಯಲ್ಲಿ ಗುರುಗಳ ಜಯಂತಿ ಆಚರಿಸಿ ಅವರ ಸಂದೇಶ ತಿಳಿಸಿರುವುದು ಶ್ಲಾಘನೀಯ. ಮಾನವೀಯ ದೃಷ್ಟಿ ಸಾರಿದ ಅವರ ಸಂದೇಶಗಳನ್ನು ಅಳವಡಿಸಿಕೊಂಡು ಮುಂದಿನ ಪೀಳಿಗೆಗೂ ದಾಟಿಸುವ ಜವಾಬ್ದಾರಿ ನಮ್ಮ ಮೇಲಿದೆ. ಅದಕ್ಕಾಗಿ ರಾಜ್ಯಾದ್ಯಂತ ಅವರ ಜಯಂತಿ ಆಚರಿಸಲಾಗುತ್ತಿದೆ ಎಂದರು.
ಯುವ ವಾಹಿನಿ ಅಧ್ಯಕ್ಷ ದಯಾನಂದ ಕರ್ಕೇರ ನಾರಾಯಣ ಗುರುಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಭರತನಾಟ್ಯದಲ್ಲಿ ವಿಶ್ವದಾಖಲೆ ಮಾಡಿದ ವಿದುಷಿ ದೀಕ್ಷಾ ವಿ. ಅವರನ್ನು ಸನ್ಮಾನಿಸಲಾಯಿತು.
ಉಡುಪಿ ನಗರಸಭಾಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಮಣಿಪುರ ಗ್ರಾಪಂ ಅಧ್ಯಕ್ಷೆ ಚೈತ್ರಾ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಜಿಪಂ ಉಪ ಕಾರ್ಯದರ್ಶಿ ಎಸ್.ಎಸ್. ಕದ್ರೋಳಿ, ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಅಧ್ಯಕ್ಷ ನಟರಾಜ ಪೂಜಾರಿ, ಗೀತಾಂಜಲಿ ಸುವರ್ಣ ಇತರರಿದ್ದರು.
ಶ್ರೀಜಾ ಕೋಟ್ಯಾನ್, ಸುರೇಶ ಸುವರ್ಣ ಮತ್ತು ಬಾಲಪ್ರತಿಭೆ ಶ್ರೀಯಾ ಕೋಟ್ಯಾನ್ ಭಕ್ತೀಗಿತೆ ಹಾಡಿದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಚಂದ್ರಶೇಖರ ಸಾಲ್ಯಾನ್ ವಂದಿಸಿದರು. ಮಹೇಶ ಕಾರ್ಯಕ್ರಮ ನಿರೂಪಿಸಿದರು.
ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ
ಬ್ರಹ್ಮಶ್ರೀ ನಾರಾಯಣ ಗುರುಗಳ ಬದುಕು ಮತ್ತು ಸಾಧನೆ ಕುರಿತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭಾಷಣ ಸ್ಪರ್ಧೆಯಲ್ಲಿ ಕೊಕ್ಕರ್ಣೆ ಕೆಪಿಎಸ್ ಶಾಲೆಯ ಪ್ರತಿತಿ ಪಿ.ಎಸ್. ಪ್ರಥಮ, ಸಾಣೂರು ಸರ್ಕಾರಿ ಪ.ಪೂ. ಕಾಲೇಜಿನ ಸಫಾ ಅಂಜುಮ್ ದ್ವಿತೀಯ, ಉದ್ಯಾವರ ಸರ್ಕಾರಿ ಪ.ಪೂ. ಕಾಲೇಜಿನ ಹನಿ ಪಿ.ಶೆಟ್ಟಿ ತೃತೀಯ, ಚಿತ್ರಕಲಾ ಸ್ಪರ್ಧೆಯಲ್ಲಿ ಬಸ್ರೂರು ಸರ್ಕಾರಿ ಪ್ರೌಢಶಾಲೆಯ ಮಹೇಶ ವಿ. ಆಚಾರ್ಯ ಪ್ರಥಮ, ಮಲ್ಪೆ ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯ ರಶ್ಮಿತ್ ಅರವಿಂದ ದ್ವಿತೀಯ, ಕುಕ್ಕುಂದೂರು ಕೆಎಂಎಎಸ್ ಶಾಲೆಯ ವೈಷ್ಣವಿ ತೃತೀಯ, ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಸಾಣೂರು ಸರ್ಕಾರಿ ಪ.ಪೂ. ಕಾಲೇಜಿನ ಸ್ನೇಹಾ ಪ್ರಥಮ, ಪೂರ್ಣಪ್ರಜ್ಞ ಕಾಲೇಜಿನ ಶ್ರಾವ್ಯಾ ಶೆಟ್ಟಿ ದ್ವಿತೀಯ, ಕಾರ್ಕಳ ಸರ್ಕಾರಿ ಪ.ಪೂ. ಕಾಲೇಜಿನ ಸಂದರ್ಶಿನಿ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.