ಜಿಲ್ಲೆ

ಆಚಾರಗಳ ಚೌಕಟ್ಟಿನಿಂದ ಹೊರಬಂದಾಗ ಸೋಲು :ಡಾ.ಗಣೇಶ್ ಅಮೀನ್ ಸಂಕಮಾರ್ ಚಿಂತನೆ

ಸೌಮ್ಯ ಆರ್

ಮೂಡುಬಿದಿರೆ: ಕೂಡುಕಟ್ಟು ವಿಚಾರಗಳು ನಿಯಮಬದ್ಧ ಆಚಾರಗಳ ಚೌಕಟ್ಟಿನಿಂದ ಹೊರಗೆ ಬಂದು, ದಾರಿಯಲ್ಲಿ ಮೆರವಣಿಗೆಯಲ್ಲಿ ಪ್ರದರ್ಶನವಾದಾಗ ಅದು ಸೋಲುತ್ತದೆ. ದ.ಕ. ಜಿಲ್ಲೆಯಲ್ಲಿ ಬಿಲ್ಲವರಿಗೆ ಇದ್ದಂತಹ ಕೂಡುಕಟ್ಟು ಬೇರೆ ಎಲ್ಲೂ ಇರಲಿಲ್ಲ. ಯಾವ ವ್ಯಕ್ತಿಗೆ ತನ್ನ ಪರಂಪರೆಯ, ಹಿರಿಯರ ಚರಿತ್ರೆ ಗೊತ್ತಿರುತ್ತದೋ ಆ ವ್ಯಕ್ತಿ ದಾರಿ ತಪ್ಪುವುದಿಲ್ಲ ಎಂದು ತುಳು ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್ ಹೇಳಿದರು.

ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಮೂಡುಬಿದಿರೆ, ಶ್ರೀ ನಾರಾಯಣಗುರು ಸೇವಾದಳ ಮತ್ತು ಶ್ರೀ ನಾರಾಯಣಗುರು ಮಹಿಳಾ ಘಟಕದ ವತಿಯಿಂದ ಅಮೃತ ಮಹೋತ್ಸವ ಸಂಭ್ರಮ ಪ್ರಯುಕ್ತ ಭಾನುವಾರ 6ನೇ ಮಾಸಿಕ ‘ಬಿರುವೆರ್ ಕೂಡುಕಟ್ಟ್ ಮದಿಪು-ತುಲಿಪು’ ಸಂವಾದದಲ್ಲಿ ಮಾತನಾಡಿದರು.

ಸಂಘದ ಅಧ್ಯಕ್ಷ ಸುರೇಶ್ ಕೆ.ಪೂಜಾರಿ ಅಧ್ಯಕ್ಷತೆವಹಿಸಿದರು. 74 ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಸಂಘ ನಿರಂತರ ಸಮಾಜಮುಖಿ ಕೆಲಸ ಮಾಡುತ್ತಾ ಬಂದಿದೆ ಎಂದರು.

ಅಮೃತ ಮಹೋತ್ಸವ ಸಮಿತಿ ಪ್ರಧಾನ ಸಂಚಾಲಕ ರಾಘು ಸಿ.ಪೂಜಾರಿ ಮಾರ್ನಾಡ್ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಬ್ಯಾಂಕ್ ನಿವೃತ್ತ ಪ್ರಬಂಧಕ ಸೀತಪ್ಪ ಕೂಡೂರು, ಲೇಖಕಿ ವಿಜಯಲಕ್ಷ್ಮೀ ಕಟೀಲು, ಉಪನ್ಯಾಸಕ ಕೇಶವ ಬಂಗೇರ, ಪಡುಕೊಣಾಜೆ ಗುಡ್ಯಾರುಮನೆ ಗಡಿಕಾರ ವೀರಪ್ಪ ಕೋಟ್ಯಾನ್, ಈಶ್ವರ ಪೂಜಾರಿ ಮಿತ್ತಲಾಡಿ ಬರ್ಕೆ, ರವೀಂದ್ರ ಪೂಜಾರಿ ಕಲ್ಯಾಣಿ ಬರ್ಕೆ, ಧರ್ಣಪ್ಪ ಕೋಟ್ಯಾನ್ ಜೋಟಿಂಜಗುತ್ತು, ಪ್ರದೀಪ್ ಶಾಂತಿ ಕಾಶಿಪಟ್ಣ, ಸುರೇಶ್ ಕೋಟ್ಯಾನ್, ಸಂಘದ ಕಾರ್ಯದರ್ಶಿ ಗಿರೀಶ್ ಕುಮಾರ್ ಹಂಡೇಲು, ಸೇವಾದಳ ಅಧ್ಯಕ್ಷ ದಿನೇಶ್ ಪೂಜಾರಿ, ಮಾಜಿ ಅಧ್ಯಕ್ಷ ರಂಜಿತ್ ಪೂಜಾರಿ, ಮಹಿಳಾ ಘಟಕ ಅಧ್ಯಕ್ಷೆ ಸವಿತಾ ದಿನೇಶ್, ಸಾವಿತ್ರಿ ಕೇಶವ, ಉದ್ಯಮಿ ನಾರಾಯಣ ಪಿ.ಎಂ, ನಿವೃತ್ತ ಸಹಾಯಕ ಆಯುಕ್ತ ಅಚ್ಯುತ ಪಿ, ಅಮೃತ ಮಹೋತ್ಸವ ಸಮಿತಿ ಸಂಚಾಲಕ ಪ್ರಕಾಶ್ ಪೂಜಾರಿ, ಸಂಘಟನಾ ಕಾರ್ಯದರ್ಶಿ ಲಕ್ಷ್ಮಣ್ ಪೂಜಾರಿ, ಸಂಘದ ಮಾಜಿ ಪದ್ಮಯ್ಯ ಬಿ.ಸುವರ್ಣ, ರವೀಂದ್ರ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

ಗಣೇಶ್ ಅಳಿಯೂರು ಸ್ವಾಗತಿಸಿದರು. ಪ್ರಜ್ವಲ್, ರೋಹನ್ ಅತಿಕಾರಿಬೆಟ್ಟು ಹಾಗೂ ಸಂಜತಾ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಸುಶಾಂತ್ ಕರ್ಕೇರಾ ವಂದಿಸಿದರು.