ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಕಾಪು ಹೊಸ ಮಾರಿಗುಡಿಯ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಸುಳ್ಯದಿಂದ ಮೂಲ್ಕಿವರೆಗಿನ ಎಲ್ಲ ಬಂಟರ ಸಂಘಗಳ ವತಿಯಿಂದ ಫೆ.22ರಂದು ಬೃಹತ್ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ನಡೆಯಲಿದೆ ಎಂದು ಒಕ್ಕೂಟ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.
ಮೂಲ್ಕಿಯ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ದಕ್ಷಿಣ ಕನ್ನಡ(ದಕ್ಷಿಣ ವಾಹಿನಿ) ಜಿಲ್ಲೆಯ ಬಂಟರ ಸಂಘಗಳು ಫೆ.22ರಂದು ಮೂಲ್ಕಿಯಲ್ಲಿ ಒಂದಾಗಿ ಮಧ್ಯಾಹ್ನ 3 ಗಂಟೆಗೆ ಮೂಳೂರು ಬಳಿಯಿಂದ ಕಾಪುವರೆಗೆ ಮೆರವಣಿಗೆ ನಡೆಯಲಿದೆ. ಉಡುಪಿ(ಉತ್ತರ ವಾಹಿನಿ) ಜಿಲ್ಲೆಯ ಬಂಟರ ಸಂಘಗಳು ಫೆ.23ರಂದು ಪಾಂಗಾಳ ಬಳಿಯಿಂದ ಹೊರೆಕಾಣಿಕೆ ಮೆರವಣಿಗೆ ನಡೆಸಲಿದೆ ಎಂದರು.
ಹಸಿರುವಾಣಿ ಹೊರೆಕಾಣಿಕೆ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ, ಫೆ.25ರಿಂದ ಕಾಪು ಶ್ರೀ ಹೊಸ ಮಾರಿಗುಡಿಯ ದೇವಸ್ಥಾನದ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಬ್ರಹ್ಮಕಲಶೋತ್ಸವ ಸಂದರ್ಭ ನಿತ್ಯ ಸುಮಾರು ಒಂದೂವರೆ ಲಕ್ಷ ಭಕ್ತರು ಅನ್ನಪ್ರಸಾದ ಸ್ವೀಕರಿಸಲಿದ್ದಾರೆ ಎಂದರು.
ಸಮಿತಿಯ ಚಂದ್ರಹಾಸ ಶೆಟ್ಟಿ ಮಾತನಾಡಿ, ಮಹಾ ಅನ್ನಸಂತರ್ಪಣೆಗೆ ಬೇಕಾಗುವ ಅಕ್ಕಿ(ಸ್ವಸ್ಥಿಕ್ ಬ್ರಾಂಡ್), ತೆಂಗಿನಕಾಯಿ, ಸೀಯಾಳ, ಸಕ್ಕರೆ, ಬೆಲ್ಲ, ತೆಂಗಿನ ಎಣ್ಣೆ, ನಂದಿನಿ ತುಪ್ಪ, ತೊಗರಿ ಬೇಳೆ(ಪೀಕಾಕ್ ಬ್ರಾಂಡ್), ಉದ್ದಿನ ಬೇಳೆ (ಪೀಕಾಕ್ ಬ್ರಾಂಡ್), ದವಸ ಧಾನ್ಯಗಳು, ಸಂಬಾರ ದಿನಸಿಗಳು, ಹೆಚ್ಚು ದಿನ ಕಾಪಿಡುವ ತರಕಾರಿಗಳು, ಹಣ್ಣು ಹಂಪಲು, ಬಾಳೆ ಎಲೆ, ಹಾಳೆ ತಟ್ಟೆ, ಶ್ರೀ ಕ್ಷೇತ್ರದಲ್ಲಿ ಮುಂದೆ ನಡೆಯಲಿರುವ ನಿತ್ಯ ಅನ್ನಸಂತರ್ಪಣೆಗೆ ವಿನಿಯೋಗವಾಗುವ ಅಡುಗೆ ಪರಿಕರಗಳನ್ನು ನೀಡಬಹುದಾಗಿದೆ ಎಂದರು.
ಮೂಲ್ಕಿ ಬಂಟರ ಸಂಘ ಗೌರವಾಧ್ಯಕ್ಷ ಸಂತೋಷ್ ಹೆಗ್ಡೆ ಮಾತನಾಡಿ, ಫೆ.22 ಬೆಳಗ್ಗೆ 10 ಗಂಟೆ ಒಳಗೆ ಹೊರೆಕಾಣಿಕೆ ಸಾಮಗ್ರಿಗಳನ್ನು ಮೂಲ್ಕಿ ಜಾಗತಿಕ ಬಂಟರ ಸಂಘದಲ್ಲಿ ತಂದೊಪ್ಪಿಸಬಹುದು ಎಂದರು.
ಒಕ್ಕೂಟ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಸಾಯಿನಾಥ ಶೆಟ್ಟಿ ಮಾಹಿತಿ ನೀಡಿದರು.
ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಶಶಿಧರ್ ಶೆಟ್ಟಿ, ಬಾಳ ಜಗನ್ನಾಥ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಸೂರಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.