ವಿಜಯವಾಣಿ ಸುದ್ದಿಜಾಲ ಉಡುಪಿ
ಪರ್ಕಳದಲ್ಲಿರುವ ಐತಿಹಾಸಿಕ ಪ್ರಸಿದ್ಧ ಶ್ರೀಮಹಾಲಿಂಗೇಶ್ವರ-ಮಹಾಣಗಣಪತಿ, ಮಹಿಷಮರ್ದಿನಿ ದೇವಸ್ಥಾನದಲ್ಲಿ ಏ.27ರಿಂದ ಮೇ 11ರ ವರೆಗೆ ಕ್ಷೇತ್ರಾಧಿಪತಿ ಮಹಾಲಿಂಗೇಶ್ವರ ದೇವರ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ನಡೆಯಲಿದೆ.
ತನ್ನಿಮಿತ್ತ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದ್ದು, ಭರದಿಂದ ಸಿದ್ಧತೆಗಳೂ ಸಾಗಿದೆ.
ಮೇ 9ರಂದು ರಾತ್ರಿ 8ಕ್ಕೆ ಮಹಾನ್ ರಥೋತ್ಸವ, ಮೇ 10ರಂದು ಭಕ್ತರಿಂದ ತುಲಾಭಾರ ಸೇವೆ, ರಾತ್ರಿ ವ್ಯಾಘ್ರ ಚಾಮುಂಡಿ ಕೋಲ, ಮೇ 11ರಂದು ಮಹಾ ಸಂಪ್ರೋಕ್ಷಣೆ, ರಾತ್ರಿ ಗೋಂದುಲು ಮಾರಿ ಕಾರ್ಯಕ್ರಮ ನಡೆಯಲಿದೆ.
ಖರಾಸುರ ಎಂಬ ರಾಕ್ಷಸನು ತನ್ನ ಇಷ್ಟಾರ್ಥ ಸಿದ್ಧಿಗಾಗಿ ಋಷಿಗಳ ತಪೋಭೂಮಿಯಂತಿದ್ದ ಈ ಪ್ರದೇಶದಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿದ ಎಂಬ ಐತಿಹ್ಯವಿದೆ. ಸ್ಥಳ ಪುರಾಣದಲ್ಲೂ ಇದೇ ಉಲ್ಲೇಖವಿದೆ. ಪರಿಸರದಲ್ಲಿ ಲಭ್ಯವಿರುವ ಸಾಕ್ಷ್ಯಾಧಾರಗಳಿಂದ ಈ ದೇಗುಲವು ಸಾವಿರ ವರ್ಷಕ್ಕಿಂತಲೂ ಹೆಚ್ಚು ಪುರಾತನದ್ದೆಂದು ಇತಿಹಾಸ ತಜ್ಞರು ಊಹಿಸಿದ್ದಾರೆ. ಭಕ್ತಜನರ ನೆರವೇ ದೇಗುಲದ ಪ್ರಧಾನ ಆಸ್ತಿಯಾಗಿದ್ದು, ಕಾಲಕಾಲಕ್ಕೆ ಅಂಗೋಪಾಂಗಗಳು ಜೀಣೋರ್ದ್ಧಾರಗೊಳ್ಳುತ್ತ ಬಂದಿದೆ. ಒಂದು ಕಾಲದಲ್ಲಿ ತೀರಾ ಜೀರ್ಣಾವಸ್ಥೆಯಲ್ಲಿದ್ದ ದೇಗುಲವನ್ನು ಆಡಳಿತ ಮಂಡಳಿಯ ಮೊಕ್ತೇಸರ ದಿ. ಗುರುರಾಜ ಯೋಯಿಸ ಅವರ ಪ್ರಯತ್ನದಲ್ಲಿ ಬೃಹದ್ಗಾತ್ರದಲ್ಲಿ ಬೆಳೆದು ನಿಂತಿದೆ. ಕ್ಷೇತ್ರ ಸ್ವಾಮಿಯಾದ ಮಹಾಲಿಂಗೇಶ್ವರ-ಮಹಾಗಣಪತಿ ದೇವರು, ಮಹಿಷಮರ್ದಿನಿ ಅಮ್ಮನವರ ಸನ್ನಿಧಿ ಮತ್ತು ಪರಿವಾರ ದೇವರುಗಳು ಭಕ್ತರ ಅಭೀಷ್ಟಗಳನ್ನೆಲ್ಲ ಈಡೇರಿಸುತ್ತಿದ್ದಾರೆ ಎನ್ನುತ್ತಾರೆ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಿ.ಜಯರಾಜ ಹೆಗ್ಡೆ.
ಪಾಡಿಗಾರು ಶ್ರೀನಿವಾಸ ತಂತ್ರಿಗಳ ಮಾರ್ಗದರ್ಶನ, ಸ್ಥಪತಿ ಅವಧಾನಿ ಸುಬ್ರಹ್ಮಣ್ಯ ಭಟ್ಟರ ವಾಸ್ತು ನಿರ್ದೇಶನ, ಎಲ್ಲೂರು ವಿಷ್ಣುಮೂರ್ತಿ ಭಟ್ ಮತ್ತು ವಿಶ್ವನಾಥ ಭಟ್ ನಿರ್ಮಾಣ, ಜೀರ್ಣೋದ್ಧಾರ ಸಮಿತಿ ಮತ್ತು ಆಡಳಿತ ಮಂಡಳಿ, ಗ್ರಾಮಸ್ಥರು, ಊರು-ಪರವೂರಿನ ಸದ್ಭಕ್ತರ ಸಹಕಾರದಿಂದ ದೇಗುಲ ಜೀರ್ಣೋದ್ಧಾರ ಆಗಿದೆ. ಭವ್ಯವಾದ ಗರ್ಭಗುಡಿ, ತೀರ್ಥ ಮಂಟಪ, ಸುತ್ತುಪೌಳಿ, ಗಣಪತಿ ಗುಡಿ, ಅಯ್ಯಪ್ಪ ಗುಡಿ, ಹುಲಿ ಚಾಮುಂಡಿ ಗುಡಿ ನಿರ್ಮಾಣಗೊಂಡಿದೆ. ದೇವರ ಪುನರ್ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವದಲ್ಲಿ ಭಕ್ತ ಜನರೆಲ್ಲ ಪಾಲ್ಗೊಳ್ಳಬೇಕೆನ್ನುವುದು ನಮ್ಮೆಲ್ಲರ ಅಪೇಕ್ಷೆ. | ಶ್ರೀನಿವಾಸ ಉಪಾಧ್ಯ. ಅಧ್ಯಕ್ಷ, ವ್ಯವಸ್ಥಾಪನಾ ಸಮಿತಿ