ಜಿಲ್ಲೆ

ಹೇಮಗಿರಿಯಲ್ಲಿ ಬ್ರಹ್ಮರಥೋತ್ಸವ ಸಂಪನ್ನ

ಎ. ಆರ್. ರಘುರಾಮ

ಕೆ.ಆರ್. ಪೇಟೆ : ಪುರಾಣ ಪ್ರಸಿದ್ಧ ಭೃಗು ಮಹರ್ಷಿಗಳ ತಪೋ ಭೂಮಿ ಹೇಮಗಿರಿಯಲ್ಲಿ ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ ಬುಧವಾರ ಸಂಭ್ರಮದಿಂದ ನೆರವೇರಿತು. ರಥದಲ್ಲಿ ವಿರಾಜಮಾನ ಉತ್ಸವ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಗೋವಿಂದನಾಮ ಸ್ಮರಣೆಯೊಂದಿಗೆ ಹರೇ ನಿವಾಸ, ಉಘೇ ರಂಗನಾಥ ಎಂಬ ಜಯ ಘೋಷಗಳು ಮುಗಿಲು ಮುಟ್ಟಿದ್ದವು. ಸಾವಿರಾರು ಭಕ್ತರು ದೇವರ ದರ್ಶನ ಪಡೆದು, ರಥೋತ್ಸವದಲ್ಲಿ ಭಾಗವಹಿಸಿ ಧನ್ಯತೆ ಮೆರೆದರು. ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಆನಂದೇಗೌಡ ಬಂದೋಬಸ್ತ್ ನೇತೃತ್ವ ವಹಿಸಿದ್ದರು.

ರಾಸುಗಳ ಮಾಲೀಕರಿಗೆ ಬಹುಮಾನ :ನಂತರ ನಡೆದ ಕಾರ್ಯಕ್ರಮದಲ್ಲಿ ಜಾತ್ರಾ ಕಾಲದಲ್ಲಿ ಭಾಗವಹಿಸಿದ್ದ ಉತ್ತಮ ರಾಸುಗಳ ಮಾಲೀಕರಿಗೆ ಬಹುಮಾನ ವಿತರಣೆ ಮಾಡಲಾಯಿತು. ಬಳಿಕ ಮಾತನಾಡಿದ ಶಾಸಕ ಮಂಜು, ರೈತರ ಜೇವನಾಡಿಯಾಗಿ ಹೆಗಲಿಗೆ ಹೆಗಲು ನೀಡಿ ದುಡಿಯುವ ರಾಸುಗಳ ತಳಿಗಳನ್ನು ಪಾಲನೆ ಮಾಡಬೇಕು. ಇವು ದೇಸೀ ಸಂಸ್ಕೃತಿ ಪ್ರತೀಕ ಎಂದರು. ನಾಡಿನಲ್ಲಿ ಸುಭಿಕ್ಷೆ ನೆಲೆಸಲಿ. ಉತ್ತಮ ಮಳೆ, ಬೆಳೆಯಾಗಿ ರೈತರ ಬದುಕು ಹಸನಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.

ತಹಸೀಲ್ದಾರ್ ಡಾ.ಅಶೋಕ, ತಾಪಂ ಇಒ ಸುಷ್ಮಾ, ಬಂಡಿಹೊಳೆ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮೀ ಅಣ್ಣಪ್ಪ, ಉಪಾಧ್ಯಕ್ಷೆ ಲೀಲಾವತಿ, ವೈದ್ಯಾಧಿಕಾರಿ ಡಾ.ಪುನೀತ್, ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ. ದೇವರಾಜು, ಕೋರಮಂಡಲ ಸಕ್ಕರೆ ಕಾರ್ಖಾನೆ ಕಬ್ಬು ವಿಭಾಗದ ಹಿರಿಯ ಅಧಿಕಾರಿ ಕೆ.ಬಾಬು ರಾಜ್ ಮತ್ತಿತರರು ಭಾಗವಹಿಸಿದ್ದರು.