ಜಿಲ್ಲೆ

ವಿದ್ಯಾರ್ಥಿಗಳಿಗೆ ಸಸಿ ನೀಡಿ ಸ್ವಾಗತ

ಹೊನ್ನಾಳಿ: ಹೊನ್ನಾಳಿ- ನ್ಯಾಮತಿ ತಾಲೂಕಿನಾದ್ಯಂತ ಶಾಲೆಗಳು ಆರಂಭಗೊಂಡಿದ್ದು, ಬೇಸಿಗೆ ರಜೆ ಮುಗಿಸಿ ಮಕ್ಕಳು ಶುಕ್ರವಾರ ಸಂಭ್ರಮದಿಂದ ಶಾಲೆಗೆ ಬಂದರು.

ಎಸ್​ಡಿಎಂಸಿ ಹಾಗೂ ಶಿಕ್ಷಕರು ಶಾಲೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಿದ್ದರು. ಶಾಲೆಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಪ್ರಾರಂಭೋತ್ಸವಕ್ಕಾಗಿ ಎರಡು ಮೂರು ದಿನ ಮುಂಚೆಯೇ ಶಾಲೆ, ಮೈದಾನ, ಅಡುಗೆ ಮನೆ ಹಾಗೂ ಸ್ವಚ್ಛತೆ ಮಾಡಿ ಮಕ್ಕಳ ಸ್ವಾಗತಕ್ಕೆ ಸಿದ್ಧ್ದಾಗಿದ್ದರು.

ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಲಾಬಿ ಹೂವು, ಸಸಿ ನೀಡಿ ಬರಮಾಡಿಕೊಂಡರೆ, ಕೆಲವು ಕಡೆಗಳಲ್ಲಿ ವರ್ಷಪೂರ್ತಿ ಶಾಲೆಗೆ ಬರುವಂತೆ ಮಕ್ಕಳ ಕೈಗೆ ಕಂಕಣ ಕಟ್ಟಿದರು, ಇನ್ನು ಕೆಲವು ಕಡೆ ಸಿಹಿ ನೀಡಿ ಆಹ್ವಾನಿಸಿದರು. ಮೊದಲ ದಿನವೇ ಅವಳಿ ತಾಲೂಕಿನ ಶಾಲೆಗಳಲ್ಲಿ ಶೇ.35 ರಷ್ಟು ಹಾಜರಾತಿ ದಾಖಲಾಗಿದೆ.

ಶಾಸಕ ಡಿ.ಜಿ. ಶಾಂತನಗೌಡ ಹೊನ್ನಾಳಿ ಪಟ್ಟಣದ ಟಿಬಿ ಶಾಲೆಗೆ ಆಗಮಿಸಿ ಮಕ್ಕಳಿಗೆ ಹೂವು ನೀಡಿ ಸ್ವಾಗತಿಸಿದರು. ನಂತರ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸರ್ಕಾರ ಗುಣಮಟ್ಟದ ಶಿಕ್ಷಣ ನೀಡಲು ಎಲ್ಲ ರೀತಿಯ ಮೂಲ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಶಿಕ್ಷಣದ ಜತೆಗೆ ಸಂಸ್ಕಾರವನ್ನು ಮಕ್ಕಳು ಪಡೆಯಬೇಕು, ಆಗ ಮಾತ್ರ ಶಿಕ್ಷಣ ಪಡೆದಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಪರಿಸರ ಜಾಗೃತಿ: ಯಕ್ಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿ ವಿದ್ಯಾರ್ಥಿಗೂ ಒಂದೊಂದು ಸಸಿ ನೀಡಿ ಸ್ವಾಗತಿಸಲಾಯಿತು. ಎಸ್​ಡಿಎಂಸಿ ಅಧ್ಯಕ್ಷ ಕೊಟ್ರೇಶ್, ಮುಖ್ಯಶಿಕ್ಷಕಿ ಎಚ್.ಜಿ. ಮಂಜುಳಾ, ಎಸ್​ಡಿಎಂಸಿ ಸದಸ್ಯರು ಹಾಗೂ ಶಿಕ್ಷಕರು ಸಿಹಿ ಅಥವಾ ಹೂವು ಕೊಡುವ ಬದಲು ಸಸಿಗಳನ್ನು ನೀಡಿ, ಪರಿಸರದ ಬಗ್ಗೆ ಜಾಗೃತಿ ಮೂಡಿಸಿ ಬರಮಾಡಿಕೊಳ್ಳುವುದು ವಿಶೇಷ ಹಾಗೂ ಅರ್ಥಪೂರ್ಣ ಎಂದರು.