ಆಳಂದ: ಶಾಸಕ ಬಿ.ಆರ್. ಪಾಟೀಲ್ ಮದ್ಯದ ವಿರುದ್ಧ ಢೋಂಗಿ ಹೋರಾಟ ನಡೆಸುತ್ತಿದ್ದಾರೆ. ಅವರೇ ಹೊಸ ಮದ್ಯದಂಗಡಿ ತೆರೆಯಲು ಶಿಫಾರಸು ಮಾಡುತ್ತಾರೆ, ಇನ್ನೊಂದೆಡೆ ದಾರು ವಿರುದ್ಧ ಪ್ರತಿಭಟಿಸುವ ಮೂಲಕ ಸಾಹಿತಿ, ವಿಚಾರವಂತರು ಹಾಗೂ ಸಾರ್ವಜನಿಕರ ದಾರಿ ತಪ್ಪಿಸುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್ ದೂರಿದರು.
2017ರಲ್ಲಿ ಬಿ.ಆರ್. ಪಾಟೀಲ್ ಶಾಸಕರಾಗಿದ್ದಾಗ ರುದ್ರವಾಡಿಯಲ್ಲಿ ಎಂಎಸ್‌ಐಎಲ್ ಮದ್ಯದಂಗಡಿ ಆರಂಭಿಸಲು ಶಿಫಾರಸು ಪತ್ರ ನೀಡಿದ್ದರು. ಇದನ್ನು ಗಮನಿಸಿದರೆ ಅವರನ್ನು ಮದ್ಯ ವಿರೋಧಿ ಎಂದು ಹೇಗೆ ಕರೆಯುವುದು? ಕೆಲವರನ್ನು ಖುಷಿಪಡಿಸಲು ಕಲಬುರಗಿಯಲ್ಲಿ ನಶಾಮುಕ್ತ ಆಂದೋಲನ ನಡೆಸಿದ್ದಾರೆ. ಕ್ಷೇತ್ರದಲ್ಲಿ ಶಾಸಕರ ಕುಮ್ಮಕ್ಕಿನಿಂದ ಸಾಕಷ್ಟು ಅಕ್ರಮ ಚಟುವಟಿಕೆ ನಡೆಯುತ್ತಿವೆ. ಅಲ್ಲದೆ ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಈ ಹಿಂದೆ ಶಾಸಕರಾಗಿದ್ದ ತಂದೆ ಸುಭಾಷ ಗುತ್ತೇದಾರ್ ಅವರು ಆಳಂದ ಪೊಲೀಸ್ ಠಾಣೆ ನಿವೇಶನದ 23 ಎಕರೆ ಪ್ರದೇಶದಲ್ಲಿ 1.85 ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ ನಿರ್ಮಿಸಲು ಎಲ್ಲ ಸಿದ್ಧತೆ ಮಾಡಿಕೊಂಡು ಟೆಂಡರ್ ಪ್ರಕ್ರಿಯೆ ಹಂತದಲ್ಲಿತ್ತು. ಆದರೀಗ ಈ ಕಾಮಗಾರಿ ಕೈಬಿಟ್ಟು ಹಣವನ್ನು ಹಳೆಯ ಸರ್ಕಾರಿ ಪ್ರಾಥಮಿಕ ಶಾಲೆ ಅಭಿವೃದ್ಧಿಗೆ ಶಾಸಕರು ವರ್ಗಾಯಿಸಿದ್ದಾರೆ. ಇದಲ್ಲದೆ ಬಟಗೇರಾ, ಬೋಳಣಿ, ಕಡಗಂಚಿ, ವಳವಂಡವಾಡಿ, ಮಟಕಿ, ಜವಳಗಾ(ಜೆ) ಸರ್ಕಾರಿ ಶಾಲೆ ಮತ್ತು ವಾರ್ಡ್ 4ರ ಸರ್ಕಾರಿ ಶಾಲೆಗಳಿಗೆ ಸಭಾ ನಿರ್ಮಾಣಕ್ಕೆ 1.60 ಕೋಟಿ ರೂ. ಇಡಲಾಗಿತ್ತು. ಇನ್ನು ಕೋತನಹಿಪ್ಪರಗಾ, ಮಾದನಹಿಪ್ಪರಗಾ, ಮುನ್ನಹಳ್ಳಿ ಪ್ರೌಢಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಗೆ 1.58 ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ ಶಾಸಕರು ಈ ಎಲ್ಲ ಅನುದಾನವನ್ನು ತಮ್ಮ ಸ್ವಗ್ರಾಮ ಸರಸಂಬಾ ಶಾಲೆಗೆ ವರ್ಗಾಯಿಸಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಆನಂದ ಪಾಟೀಲ್ ಕೋರಳ್ಳಿ, ಮಲ್ಲಿನಾಥ ಪರೇಣಿ ಇದ್ದರು.
ಶಾಸಕರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆಯಡಿ ಕೇಸ್: ಶಾಸಕ ಬಿ.ಆರ್. ಪಾಟೀಲ್ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಟುವಾಗಿ ಟೀಕಿಸಿದ್ದು, ಈ ಸಂಬAಧ ಪ್ರಜಾಪ್ರತಿನಿಧಿ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ ಎಂದು ಹರ್ಷಾನಂದ ಗುತ್ತೇದಾರ್ ತಿಳಿಸಿದರು. ಶಾಸಕರಿಗೆ ಮಾತಿನ ಮೇಲೆ ಹಿಡಿತವಿಲ್ಲ, ಬಾಯಿಗೆ ಬಂದAತೆ ಮಾತನಾಡುತ್ತಾರೆ. ಒಂದು ಹುದ್ದೆಯಲ್ಲಿ ಇದ್ದುಕೊಂಡು ಪ್ರಧಾನಿಯನ್ನು ನಿಂದಿಸುವ ಮೂಲಕ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ರಾಮ ಮಂದಿರ ಮೇಲೆ ಬಾಂಬ್ ಹಾಕಿಸಿ ಮುಸ್ಲಿಮರ ತಲೆಗೆ ಕಟ್ಟುತ್ತಾರೆ ಎಂಬ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಕಲಂ 268, 295ಎ, 298, 499, 501 ಮತ್ತು 504ರಡಿ ಸ್ಥಳೀಯ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ಹೇಳಿದರು.