ದಾವಣಗೆರೆ: ಆಟದ ಭರಾಟೆಯಲ್ಲಿ ಮಕ್ಕಳು ಹಲವು ಸಾಹಸ-ಚೇಷ್ಟೆಗಳಿಗೆ ಕೈಹಾಕುತ್ತಾರೆ. ಅದರಿಂದಾಗಿ ಹಲವೊಮ್ಮೆ ಸಣ್ಣಪುಟ್ಟ ಪೆಟ್ಟು ತಿನ್ನುವುದು ಸಾಮಾನ್ಯ. ಆದರೆ, ದಾವಣಗೆರೆಯಲ್ಲಿ ಬಾಲಕನೊಬ್ಬ ಕ್ರೀಡಾಂಗಣದ ಮುಚ್ಚಿದ್ದ ಗೇಟನ್ನು ಹತ್ತಿ ಇಳಿಯುವ ಪ್ರಯತ್ನದಲ್ಲಿ ತನ್ನ ಬಲಗೈನ ಉಂಗುರ ಬೆರಳನ್ನೇ ತುಂಡರಿಸಿಕೊಂಡಿರುವ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲೆ ಹರಿಹರ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದ ಪ್ರವೇಶದ ಗೇಟ್‌ನಲ್ಲಿ ಈ ಘಟನೆ ನಡೆದಿದೆ. ಸಾಮಾನ್ಯ ದಿನಗಳಲ್ಲಿ ಕ್ರೀಡಾಂಗಣದ ದೊಡ್ಡ ಗೇಟ್ ಓಪನ್ ಮಾಡಲ್ಲ. ಮುಖ್ಯದ್ವಾರದಲ್ಲಿರುವ ಸಣ್ಣ ಗೇಟಿನ ಮೂಲಕ ಪ್ರವೇಶಕ್ಕೆ ಅವಕಾಶವಿರುತ್ತದೆ. ಹರಿಹರದ ಮರಾಠಗಲ್ಲಿ ನಿವಾಸಿ ನಾಗರಾಜ ಅವರ ಮಗ ಯಶವಂತ್ ಕುಮಾರ್(15) 10ನೇ ತರಗತಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿ.
ಇಂದು ಕ್ರೀಡಾಂಗಣಕ್ಕೆ ಬಂದ ಯಶವಂತ್, ದೊಡ್ಡ ಗೇಟನ್ನು ಹತ್ತಿ ಇಳಿಯುವಾಗ, ಗೇಟಿನ ಮೊನಚಾದ ತುದಿಗೆ ಬೆರಳು ಸಿಲುಕಿಕೊಂಡು ತುಂಡಾಗಿಬಿಟ್ಟಿದೆ. ತುಂಬಾ ನೋವಿನ ನಡುವೆಯೂ ಧೃತಿಗೆಡದ ಬಾಲಕ ಬೆರಳನ್ನು ಅಲ್ಲೇ ಬಿಟ್ಟು ತಕ್ಷಣ ಸಾರ್ವಜನಿಕ ಆಸ್ಪತ್ರೆಗೆ ತೆರಳಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನಂತರ ವೈದ್ಯರು ಕೈಬೆರಳು ತರಲು ಹೇಳಿದ್ದಾರೆ. ಸ್ನೇಹಿತರ ಜತೆ ಬಂದು ತುಂಡಾದ ಬೆರಳನ್ನು ಯಶವಂತ್ ತೆಗೆದುಕೊಂಡು ಹೋಗಿದ್ದು, ಆಸ್ಪತ್ರೆಯ ವೈದ್ಯರು ಅದನ್ನು ಮತ್ತೆ ಜೋಡಿಸುವ ಪ್ರಯತ್ನ ನಡೆಸಿದ್ದಾರೆ.