ಬಾಳೆಹೊನ್ನೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಕುಳಿತಿರುವುದು.  
ಜಿಲ್ಲೆ

ತರಗತಿ ಬಹಿಷ್ಕರಿಸಿ ಮುಖ್ಯಶಿಕ್ಷಕರ ವಿರುದ್ಧ ಪ್ರತಿಭಟನೆ

ಎಸ್.ಎನ್.ರವೀಂದ್ರ

ಬಾಳೆಹೊನ್ನೂರು: ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಮುಖ್ಯಶಿಕ್ಷಕರು ಒತ್ತಡ ಹೇರುತ್ತಿದ್ದು, ಕ್ರೀಡೆಯಲ್ಲಿ ಪಾಲ್ಗೊಂಡವರನ್ನು ಅಶ್ಲೀಲವಾಗಿ ನಿಂದಿಸುತ್ತಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಶುಕ್ರವಾರ ತರಗತಿ ಬಹಿಷ್ಕರಿಸಿದರು.

ಪ್ರೌಢಶಾಲೆಯಲ್ಲಿ 350ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದು ಹಲವರು ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿದ್ದು ದೈಹಿಕ ಶಿಕ್ಷಣ ಶಿಕ್ಷಕರು ತರಬೇತಿ ನೀಡುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕ್ರೀಡಾ ತರಬೇತಿ, ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಮುಖ್ಯಶಿಕ್ಷಕರು ತಡೆಯೊಡ್ಡುತ್ತಿದ್ದಾರೆ. ಕ್ರೀಡಾ ತರಬೇತಿಗೆ ತೆರಳಿದ ವಿದ್ಯಾರ್ಥಿಗಳನ್ನು ಮುಖ್ಯಶಿಕ್ಷಕರು ಅಶ್ಲೀಲ ಪದಗಳಿಂದ ನಿಂದಿಸುತ್ತಿದ್ದಾರೆ. ಪಾಲಕರು, ತರಬೇತಿ ನೀಡುತ್ತಿರುವ ಶಿಕ್ಷಕರನ್ನೂ ಕೆಟ್ಟ ಪದಗಳಿಂದ ನಿಂದಿಸುತ್ತಿದ್ದಾರೆ. ಕ್ರೀಡೆಯಲ್ಲಿ ಸಾಧನೆ ಮಾಡಬಾರದು ಎಂಬ ದುರುದ್ದೇಶ ಅವರದ್ದಾಗಿದೆ ಎಂದು ವಿದ್ಯಾರ್ಥಿಗಳು ದೂರಿದರು.
ಬೆಳಗ್ಗೆ 8.30ರಿಂದ 9.30 ಹಾಗೂ ಸಂಜೆ 4.30ರಿಂದ 5.30ರವರೆಗೆ ಶಾಲಾ ತರಗತಿಗಳ ಮುಂಚಿತ ಹಾಗೂ ನಂತರದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ತರಬೇತಿ ನೀಡುತ್ತಿದ್ದಾರೆ. ಇದಕ್ಕೂ ಮುಖ್ಯಶಿಕ್ಷಕರು ಅಡ್ಡಗಾಲು ಹಾಕುತ್ತಿದ್ದಾರೆ. ಇದರಿಂದಾಗಿ ಮಾನಸಿಕವಾಗಿ ನೊಂದಿದ್ದೇವೆ. ನಮಗೆ ಓದಿನಷ್ಟೇ ಕ್ರೀಡೆಯೂ ಮುಖ್ಯ. ಕ್ರೀಡಾ ತರಬೇತಿ ನೀಡುವುದಿಲ್ಲವೆಂದಾದರೆ ಬರೆದುಕೊಡಿ ಎಂದು ವಿದ್ಯಾರ್ಥಿಗಳು ದೈಹಿಕ ಶಿಕ್ಷಣ ಶಿಕ್ಷಕರನ್ನು ಒತ್ತಾಯಿಸಿದರು.
ಮುಖ್ಯಶಿಕ್ಷಕರ ಧೋರಣೆ ಖಂಡಿಸಿ 100ಕ್ಕೂ ಅಧಿಕ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಬಿ.ಕಣಬೂರು ಗ್ರಾಪಂಗೆ ತೆರಳಿ ಪಿಡಿಒ, ಅಧ್ಯಕ್ಷ, ಉಪಾಧ್ಯಕ್ಷರಿಗೆ ದೂರು ಹೇಳಿದರು. ಮಧ್ಯಾಹ್ನದ ಬಿಸಿಯೂಟವನ್ನೂ ಸ್ವೀಕರಿಸುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು. ಮಧ್ಯಾಹ್ನ 1 ಗಂಟೆ ನಂತರ ದೈಹಿಕ ಶಿಕ್ಷಕರು ವಿದ್ಯಾರ್ಥಿಗಳ ಮನವೊಲಿಸಿ ಬಿಸಿಯೂಟ ಸ್ವೀಕರಿಸಿ, ತರಗತಿಗಳಿಗೆ ತೆರಳುವಂತೆ ಮಾಡಿದರು. ಜು.24ರೊಳಗೆ ಸಮಸ್ಯೆ ಬಗೆಹರಿಸದಿದ್ದಲ್ಲಿ ಪುನಃ ತರಗತಿಗಳನ್ನು ಬಹಿಷ್ಕರಿಸಲಾಗುವುದು. ಮುಖ್ಯಶಿಕ್ಷಕರನ್ನು ವರ್ಗಾವಣೆ ಮಾಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
ಈ ಕುರಿತು ಮುಖ್ಯಶಿಕ್ಷಕ ಕೊಟ್ರೇಶಪ್ಪ ಮಾತನಾಡಿ, ಶಾಲಾ ಅವಧಿಯಲ್ಲಿ ವಿದ್ಯಾರ್ಥಿಗಳು ಕ್ರೀಡಾ ತರಬೇತಿಗೆ ಸಮಯ ಕೇಳುತ್ತಿದ್ದಾರೆ. ಇದಕ್ಕೆ ಅವಕಾಶ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಗುಂಪುಕಟ್ಟಿಕೊಂಡು ತರಗತಿ ಬಹಿಷ್ಕರಿಸಿದ್ದಾರೆ. ಶಾಲಾ ಸಮಯದಲ್ಲಿ ಕ್ರೀಡೆಗೆ ಅವಕಾಶ ಮಾಡಿಕೊಟ್ಟರೆ ಪಾಠಕ್ಕೆ ತೊಂದರೆಯಾಗಲಿದೆ. ಲಿತಾಂಶದಲ್ಲೂ ಕುಸಿತಗೊಳ್ಳಲಿದೆ ಎಂದು ವಿಷಯವಾರು ಶಿಕ್ಷಕರು ಹೇಳಿದ್ದಾರೆ. ಹಲವು ಪಾಲಕರು ಕ್ರೀಡೆಗೆ ಅವಕಾಶ ನೀಡದೆ ಪಾಠ, ಪ್ರವಚನ ಮಾಡಿ ಎನ್ನುತ್ತಿದ್ದಾರೆ. ಒಂದೆರೆಡು ದಿನದಲ್ಲಿ ಪಾಲಕರ ಸಭೆ ಕರೆದು ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.