ಜಿಲ್ಲೆ

ಮೌಲ್ಯಮಾಪನ ಬಹಿಷ್ಕರಿಸಿ ಪೆನ್ ಡೌನ್ ಪ್ರತಿಭಟನೆ

ವೀರೇಶ ಸೌದ್ರಿ

ಹಾನಗಲ್ಲ: ಹಾವೇರಿ ವಿವಿಯನ್ನು ಮುಚ್ಚುವ ಮೂಲಕ ಗ್ರಾಮೀಣ ಮಕ್ಕಳಿಗೆ ಶೈಕ್ಷಣಿಕವಾಗಿ ಹಿನ್ನಡೆ ಉಂಟು ಮಾಡುವ ಮತ್ತು ಪ್ರಾದೇಶಿಕ ಅಸಮಾನತೆಗೆ ಮುಂದಾಗಿರುವ ಹುನ್ನಾರ ಖಂಡಿಸಿ ಪದವಿ ಕನ್ನಡ ಹಾಗೂ ಇಂಗ್ಲಿಷ್ ವಿಷಯಗಳ ಮೌಲ್ಯಮಾಪನ ಕೇಂದ್ರದಲ್ಲಿ ಕೆಲಕಾಲ ಮೌಲ್ಯಮಾಪನ ಬಹಿಷ್ಕರಿಸಿ ಪೆನ್ ಡೌನ್ ನಡೆಸುವ ಮೂಲಕ ಮೌಲ್ಯಮಾಪಕರು ಮಂಗಳವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಕುಮಾರೇಶ್ವರ ಕಲಾ-ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಾವೇರಿ ವಿವಿಯ ಕನ್ನಡ ಹಾಗೂ ಇಂಗ್ಲಿಷ್ ಮೌಲ್ಯಮಾಪನ ಕೇಂದ್ರದ 70ಕ್ಕೂ ಅಧಿಕ ಮೌಲ್ಯಮಾಪಕರು ಕೆಲ ಕಾಲ ಮೌಲ್ಯಮಾಪನ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಕನ್ನಡ ಮೌಲ್ಯಮಾಪನ ವಿಭಾಗದ ಚೇರ್ಮನ್ ಡಾ.ಜಗದೀಶ ಹೊಸಮನಿ ಮಾತನಾಡಿ, ಶೈಕ್ಷಣಿಕ ಅವಕಾಶವನ್ನು ಮೊಟಕುಗೊಳಿಸುವ ಸರ್ಕಾರದ ನಿರ್ಣಯಗಳು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಲಿವೆ. ಗ್ರಾಮೀಣ ಮಕ್ಕಳ ಹಿತಕ್ಕೆ ತೆರೆದುಕೊಂಡಿರುವ ಹಾವೇರಿ ವಿಶ್ವವಿದ್ಯಾಲಯವನ್ನು ಆರ್ಥಿಕ ಮಾನದಂಡದಲ್ಲಿ ಬಂದ್ ಮಾಡುವುದು ಸರಿಯಲ್ಲ. ಇದು ವ್ಯತಿರಿಕ್ತ ಪರಿಣಾಮ ಬೀರಬಲ್ಲದು. ಈ ತೀರ್ಮಾನ ಮುಂದೆ ಉಗ್ರ ಹೋರಾಟಕ್ಕೂ ನಾಂದಿಯಾದೀತು. ಇದನ್ನು ವಿರೋಧಿಸಿ ಈಗಾಗಲೇ ಹಲವು ರೀತಿಯ ಪ್ರತಿಭಟನೆಗಳು ನಡೆಯುತ್ತಿದ್ದು, ಸರ್ಕಾರ ನಾಡಿನ ಮಕ್ಕಳ ಹಿತಕ್ಕಾಗಿ ಹಾವೇರಿ ವಿಶ್ವವಿದ್ಯಾಲಯ ಮುಚ್ಚುವ ವಿಚಾರವನ್ನು ತಕ್ಷಣ ಕೈಬಿಡಬೇಕು ಎಂದರು.

ಮೌಲ್ಯಮಾಪಕ ಡಾ.ಚಾಮರಾಜ ಕಮ್ಮಾರ ಮಾತನಾಡಿ, ಹಾವೇರಿ ವಿಶ್ವವಿದ್ಯಾಲಯ ರದ್ದು ಎಂಬ ಸುದ್ದಿಯೇ ಬರಸಿಡಿಲಿನಂತಿದೆ. ಇಲ್ಲಿನ ಮಕ್ಕಳಿಗೆ ಉನ್ನತ ಶಿಕ್ಷಣವನ್ನೇ ಮುಚ್ಚಿದಂತಾಗುತ್ತದೆ. ವಿಶೇಷವಾಗಿ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗಿರುವ ಹಾವೇರಿ ವಿಶ್ವವಿದ್ಯಾಲಯವನ್ನು ಯಥಾಸ್ಥಿತಿ ಉಳಿಸಿಕೊಂಡು ಸರ್ಕಾರ ಉಪಕರಿಸಲಿ. ಬಡ ರೈತರ ಮಕ್ಕಳು ಪದವಿ ಶಿಕ್ಷಣಕ್ಕಾಗಿ ಧಾರವಾಡದಂಥ ನಗರಗಳಿಗೆ ತೆರಳುವುದು ಸಾಧ್ಯವಾಗದ ಮಾತು. ಅದರಲ್ಲೂ ವಿದ್ಯಾರ್ಥಿನಿಯರಿಗೆ ಸರ್ಕಾರದ ಈ ನಿರ್ಧಾರದಿಂದ ಉನ್ನತ ಶಿಕ್ಷಣವೇ ಸಿಗದಂತಾಗುತ್ತದೆ ಎಂದರು.

ಮೌಲ್ಯ ಮಾಪಕ ಡಾ. ಮಹಮ್ಮದ್‌ಶರ್ೀ ಹಾನಗಲ್ಲ ಮಾತನಾಡಿ, ಅನುದಾನ ನೀಡಿ ಹಾವೇರಿ ವಿಶ್ವವಿದ್ಯಾಲಯವನ್ನು ಪ್ರೋತ್ಸಾಹಿಸುವ ಬದಲು ಮುಚ್ಚುವ ಮಾತು ಕೇಳುತ್ತಿರುವುದು ನಿಜಕ್ಕೂ ನಂಬಲಸಾಧ್ಯವಾದ ಸಂಗತಿ. ಎಲ್ಲ ಕ್ಷೇತ್ರಗಳನ್ನೂ ಲಾಭದ ಲೆಕ್ಕಾಚಾರದಿಂದ ಸರ್ಕಾರ ನೋಡಬಾರದು. ಶಿಕ್ಷಣಕ್ಕೆ ಹೆಚ್ಚಿನ ಅನುದಾನ ಖರ್ಚು ಮಾಡುವ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ. ದೇಶದ ಅಭಿವದ್ಧಿಯ ಮಾನದಂಡ ಶಿಕ್ಷಣ ಎಂಬುದನ್ನು ಮನಗಾಣಬೇಕು ಎಂದರು.

ಮೌಲ್ಯಮಾಪನ ಕೇಂದ್ರದ ಮುಖ್ಯ ಸಂಯೋಜಕ ಡಾ.ಎಂ.ಎಚ್.ಹೊಳೆಯಣ್ಣನವರ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಉಪಮುಖ್ಯ ಸಂಯೋಜಕ ಡಾ.ಪ್ರಕಾಶ ಹೊಳೇರ, ಆಂಗ್ಲಭಾಷಾ ವಿಷಯದ ಚೇರ್‌ಮನ್ ಡಾ. ಮಾಲತೇಶ ಬಂಡಿವಡ್ಡರ ಸೇರಿದಂತೆ 70 ಕ್ಕೂ ಅಧಿಕ ಮೌಲ್ಯಮಾಪಕರಿದ್ದರು.