ಜಿಲ್ಲೆ

24 ತಾಸು ಕಳೆದರೂ ಸಿಗದ ಬಾಲಕನ ಸುಳಿವು

Dakshina Kannada

ಬೆಳ್ತಂಗಡಿ: ಉಜಿರೆ ರಥಬೀದಿ ನಿವಾಸಿ, ಉದ್ಯಮಿ ಎ.ಕೆ.ಶಿವನ್ ಅವರ 8 ವರ್ಷದ ಮೊಮ್ಮಗ ಅನುಭವ್(8)ಅಪಹರಣ ನಡೆದು 24 ತಾಸು ಕಳೆದರೂ, ಪೊಲೀಸರಿಗೆ ಆರೋಪಿಗಳ ಜಾಡು ಹಿಡಿಯಲು ಸಾಧ್ಯವಾಗಿಲ್ಲ. ಇನ್ನೊಂದೆಡೆ ಬಾಲಕನ ಸುಳಿವೂ ಇಲ್ಲ.

ಪ್ರಕರಣ ಬೇಧಿಸಲು ಎಸ್.ಪಿ.ಲಕ್ಷ್ಮೀಪ್ರಸಾದ್ ನೇತೃತ್ವದಲ್ಲಿ ಐದು ತಂಡ ರಚಿಸಲಾಗಿದೆ. ಎಸ್.ಪಿ.ಲಕ್ಷ್ಮೀಪ್ರಸಾದ್ ಹಾಗೂ ಬಂಟ್ವಾಳ ಡಿವೈಎಸ್‌ಪಿ ವೆಲೆಂಟೈನ್ ಡಿಸೋಜ, ಬೆಳ್ತಂಗಡಿ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ, ಉಪನಿರೀಕ್ಷಕ ನಂದಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಮನೆಮಂದಿಯೊಂದಿಗೆ ಮಾತುಕತೆ ನಡೆಸಿದರು.

ಅನುಭವ್ ಜತೆ ಶಿವನ್ ಪ್ರತಿನಿತ್ಯ ರಥಬೀದಿ ಮುಂಭಾಗ ವಾಕಿಂಗ್ ತೆರಳುತ್ತಿದ್ದರು. ಡಿ.17ರಂದು ಸಂಜೆ 6.30ರ ವೇಳೆಗೆ ಅಜ್ಜ ಮತ್ತು ಮೊಮ್ಮಗ ರಥಬೀದಿಯಿಂದ ವಾಕಿಂಗ್ ಮುಗಿಸಿ ಮನೆ ಗೇಟು ಮುಂಭಾಗ ತಲುಪಿದ್ದಾರೆ. ಅಜ್ಜನ ಮುಂದೆಯೇ ಮೊಮ್ಮಗ ನಡೆದುಕೊಂಡು ಹೋಗುತ್ತಿದ್ದ. ಗೇಟಿನ ಸಮೀಪ ಬಿಳಿ ಕಾರು ಹಾಗೂ ಇಬ್ಬರು ನಿಂತಿದ್ದರು. ಅನುಭವ್ ಕಾರಿನ ಸಮೀಪ ಬರುತ್ತಿದ್ದಂತೆ ಓರ್ವ ಮಗುವನ್ನು ಎತ್ತಿಕೊಂಡು ಕಾರಿನೊಳಕ್ಕೆ ಹಾಕಿ ಪರಾರಿಯಾಗಿದ್ದರು. ತಕ್ಷಣ ಅನುಭವ್ ತಾಯಿ ಸರಿತಾ ಓಡಿಬಂದಂತೆ ಕಾರು ಪರಾರಿಯಾಗಿದೆ. ಸ್ವಲ್ಪ ಸಮಯದ ಬಳಿಕ ಅಪಹರಣಕಾರರು ಮಗುವಿನ ತಾಯಿಗೆ ಕರೆಮಾಡಿ 100 ಬಿಟ್ ಕಾಯಿನ್ ಅಂದರೆ 17 ಕೋಟಿ ರೂ. ಹಣ ನೀಡುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ. ಅಪಹರಣಕ್ಕೊಳಗಾದ ಮಗುವಿನ ತಂದೆ ಬಿಜೊಯ್ಗೆ ನಿರಂತರ ಸಾಮಾಜಿಕ ಜಾಲತಾಣದಲ್ಲಿ ಅಪಹರಣಕಾರರ ಸಂದೇಶ ರವಾನೆಯಾಗುತ್ತಿದೆ. ಶುಕ್ರವಾರ ಮಧ್ಯಾಹ್ನ 100 ಬಿಟ್ ಕಾಯಿನ್ ವಿಚಾರ 60 ಬಿಟ್ ಕಾಯಿನ್ ಅಂದರೆ 10 ಕೋಟಿ ರೂ.ಗೆ ಬಂದು ನಿಂತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹಿಂದಿ ಭಾಷೆಯಲ್ಲಿ ವ್ಯವಹಾರ ನಡೆಸುತ್ತಿದ್ದ ಅಪಹರಣಕಾರರ ಬಗ್ಗೆ ನಾನಾ ಆಯಾಮಗಳಿಂದ ತನಿಖೆ ಮುಂದುವರಿಯುತ್ತಿದೆ. ಅಪಹರಣಕ್ಕೊಳಗಾದ ಮಗುವಿನ ತಂದೆ ಬಿಜೊಯ್ ಅವರಿಗೆ ನಿರಂತರ ಸಾಮಾಜಿಕ ಜಾಲತಾಣದಲ್ಲಿ ಅಪಹರಣಕಾರರ ಸಂದೇಶ ಬರುತ್ತಿದೆ.

ಬಿಟ್ ಕಾಯಿನ್ ಎಂದರೆ

ಬಿಟ್ ಕಾಯಿನ್ ಎಂದರೆ ಡಿಜಿಟಲ್ ಹಣಕಾಸು ಅಥವಾ ಡಿಜಿಟಲ್ ಕರೆನ್ಸಿ. ಆನ್‌ಲೈನ್ ಮೂಲಕ ಪಾವತಿ ಮಾಡಬೇಕಾಗುತ್ತದೆ. ಸುಮಾರು 800 ಇಂತಹ ಕ್ರಿಪ್ಟೋ ಕರೆನ್ಸಿಗಳಿವೆ. ಈ ತಂತ್ರಜ್ಞಾನವನ್ನು ಬ್ಲಾೃಕ್ ಚೈನ್ ಎಂಬ ನೂತನ ವಿಧಾನದ ಆಧಾರದಲ್ಲಿ ಸಾರ್ವಜನಿಕರಿಗೆ ಹಣಕಾಸಿನ ವ್ಯವಹಾರಗಳನ್ನು ವಿಶ್ವಮಟ್ಟದಲ್ಲಿ ನಡೆಸಲು ಸಾಧ್ಯ. ಕ್ರಿಪ್ಟೋ ಕರೆನ್ಸಿ ಬಳಸಿ ಹಣದ ವ್ಯವಹಾರ ನಡೆಸುವ ವೀಸಾ, ಮಾಸ್ಟರ್ ಕಾರ್ಡ್ ಮೊದಲಾದ ವ್ಯವಸ್ಥೆಗಳೂ ಇವೆ. ಆದರೆ ಇವು ಒಂದು ದೇಶದಿಂದ ಇನ್ನೊಂದು ದೇಶದ ನಡುವಣ ವ್ಯವಹಾರದಲ್ಲಿ ಮೊದಲು ಈ ದೇಶದ ಹಣವನ್ನು ಡಾಲರುಗಳಿಗೂ, ಬಳಿಕ ಡಾಲರುಗಳಿಂದ ಆ ದೇಶದ ಹಣಕ್ಕೂ ಪರಿವರ್ತಿಸಿ ವಹಿವಾಟು ಮಾಡಬೇಕು. ಆದರೆ ಈ ಎರಡೂ ಪರಿವರ್ತನೆಗಳಲ್ಲಿ ಸಂಸ್ಥೆಗಳು ಅಪಾರವಾದ ದಲ್ಲಾಳಿ ಹಣ ಪಡೆದುಕೊಳ್ಳುತ್ತವೆ. ಈ ವಹಿವಾಟು ಸರ್ಕಾರದ ಅಧೀನದಲ್ಲಿಯೇ ಬ್ಯಾಂಕುಗಳ ಮೂಲಕವೇ ನಡೆಯುತ್ತವೆ. ಆದರೆ ಬಿಟ್ ಕಾಯಿನ್‌ಗೆ ನಿರ್ಬಂಧವಿಲ್ಲ. ಭಾರತದಲ್ಲಿ ವಿತ್ತ ಸಚಿವಾಲಯ ಹಾಗೂ ಆರ್‌ಬಿಐ ಸದ್ಯಕ್ಕೆ ಈ ಹಣಕ್ಕೆ ಮಾನ್ಯತೆ ನೀಡಿಲ್ಲ.