ಗಂಗೊಳ್ಳಿ: ಮರವಂತೆ ಹೊರಬಂದರು ಸಮೀಪ ಭಾನುವಾರ ಕೊಳವೆ ಬಾವಿ ದುರಸ್ತಿ ಸಂದರ್ಭ ಮಣ್ಣು ಕುಸಿದ ಪರಿಣಾಮ ಮಣ್ಣಿನಡಿ ಸಿಕ್ಕಿಹಾಕಿಕೊಂಡಿದ್ದ ಯುವಕನನ್ನು ಸತತ ಐದು ಗಂಟೆ ಕಾರ್ಯಾಚರಣೆ ಮೂಲಕ ಸುರಕ್ಷಿತವಾಗಿ ಮೇಲಕ್ಕೆತ್ತಲಾಯಿತು. ಉಪ್ಪುಂದ ಶಾಲೆ ಬಾಗಿಲು ನಿವಾಸಿ ರೋಹಿತ್ ಖಾರ್ವಿ(35) ರಕ್ಷಿಸಲ್ಪಟ್ಟ ಯುವಕ. ರೋಹಿತ್ ಅವರನ್ನು ಚಿಕಿತ್ಸೆಗಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾನುವಾರ ಬೆಳಗ್ಗೆ 8ರ ಸುಮಾರಿಗೆ ಮರವಂತೆ ಹೊರ ಬಂದರು ಪ್ರದೇಶದಲ್ಲಿನ ನಿರುಪಯುಕ್ತ ಶೆಡ್ ಸಮೀಪ ನಿರ್ಮಿಸಲಾಗಿದ್ದ ಬೋರ್‌ವೆಲ್ ದುರಸ್ತಿ ಮಾಡಲು ಅದರ ಸುತ್ತಲೂ ಹೊಂಡ ತೋಡಲಾಗಿತ್ತು. ಈ ಹೊಂಡಕ್ಕೆ ಇಳಿದಿದ್ದ ರೋಹಿತ್ ಖಾರ್ವಿ ಮೇಲೆ ಇದ್ದಕ್ಕಿದ್ದಂತೆ ಮಣ್ಣು ಕುಸಿದುಬಿತ್ತು. ಸುಮಾರು 15-20 ಅಡಿ ಆಳದ ಹೊಂಡದಲ್ಲಿ ಖಾರ್ವಿ ಮಣ್ಣಿನಡಿ ಸಿಲುಕಿ ಹಾಕಿಕೊಂಡಿದ್ದನು. ತಲೆ ಬಿಟ್ಟು ದೇಹದ ಇತರ ಭಾಗ ಮಣ್ಣಿನೊಳಗೆ ಸಿಕ್ಕಿಹಾಕಿಕೊಂಡಿತ್ತು.
ತಕ್ಷಣವೇ ಅಗ್ನಿಶಾಮಕ ದಳ ಹಾಗೂ ಗಂಗೊಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ ಜತೆಗಿದ್ದವರು ರೋಹಿತನನ್ನು ರಕ್ಷಿಸುವ ಕೆಲಸ ಪ್ರಾರಂಭಿಸಿದರು. 15 ಅಡಿ ಆಳದಲ್ಲಿ ರೋಹಿತ್ ಖಾರ್ವಿ ತಲೆ ಭಾಗ ಮಾತ್ರ ಮೇಲಿದ್ದು, ದೇಹದ ಉಳಿದ ಭಾಗ ಮಣ್ಣಿನೊಳಗೆ ಸಿಲುಕಿತ್ತು. ಸ್ಥಳಕ್ಕೆ ಆಗಮಿಸಿದ ಕುಂದಾಪುರ ಅಗ್ನಿಶಾಮಕ ದಳ ಸಿಬ್ಬಂದಿ ಹೊಂಡದೊಳಗೆ ಇಳಿದು ರೋಹಿತನನ್ನು ಮೇಲಕ್ಕೆತ್ತುವ ಪ್ರಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ. ಮಣ್ಣು ಮತ್ತಷ್ಟು ಕುಸಿದ ಪರಿಣಾಮ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಯಿತು. ಬಳಿಕ ಜೆಸಿಬಿ ಮೂಲಕ ಬೋರ್‌ವೆಲ್ ಸಮೀಪ ಹೊಂಡ ಮಾಡಿ ರೋಹಿತನನ್ನು ಮೇಲಕ್ಕೆತ್ತುವ ಪ್ರಯತ್ನ ನಡೆಸಿದರೂ ಇನ್ನೊಂದು ಬದಿಯಲ್ಲಿ ಮತ್ತ ಷ್ಟು ಮಣ್ಣು ಕುಸಿಯಲಾರಂಭಿಸಿದ್ದರಿಂದ ಯತ್ನ ವಿಫಲವಾಯಿತು. ಧೃತಿಗೆಡದ ಸ್ಥಳೀಯರು ತಮ್ಮದೇ ಶೈಲಿಯಲ್ಲಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದರು. ಇದೇ ವೇಳೆ ಇನ್ನೊಂದು ಬದಿಯಲ್ಲಿ ಜೆಸಿಬಿ ಹೊಂಡ ತೆಗೆಯುವ ಕೆಲಸ ಪ್ರಾರಂಭಿಸಲಾಯಿತು. ಬೋರ್‌ವೆಲ್ ಹೊಂಡದಲ್ಲಿದ್ದ ಮಣ್ಣನ್ನು ತೆರವುಗೊಳಿಸಿ ಸತತ ಐದು ಗಂಟೆ ಕಾರ್ಯಾಚರಣೆ ಬಳಿಕ ಸ್ಥಳೀಯರ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಅವಿರತ ಶ್ರಮದಿಂದ ರೋಹಿತನನ್ನು ಯಶಸ್ವಿಯಾಗಿ ಹೊಂಡದಿಂದ ಮೇಲಕ್ಕೆತ್ತಲಾಯಿತು.
ಆಕ್ಸಿಜನ್ ಪೂರೈಕೆ: ಮಣ್ಣಿನೊಳಗೆ ಸಿಲುಕಿದ್ದ ರೋಹಿತ್ ಸ್ಥಳೀಯರೊಂದಿಗೆ ರಕ್ಷಣಾ ಕಾರ್ಯಾಚರಣೆ ವೇಳೆ ಮಾತನಾಡುತ್ತಿದ್ದರು. ಪೈಪ್ ಮೂಲಕ ಅವರಿಗೆ ಹಣ್ಣಿನ ಜ್ಯೂಸ್ ನೀಡಲಾಗಿತ್ತು. ಪೈಪ್ ಮೂಲಕ ಆಕ್ಸಿಜನ್ ಪೂರೈಸಲಾಗಿತ್ತು. ಮಣ್ಣಿನೊಳಗೆ ಸಿಲುಕಿದ್ದ ರೋಹಿತ್ ಧೈರ್ಯ ಕಳೆದುಕೊಳ್ಳದಿರುವುದು ಹಾಗೂ ಆರೋಗ್ಯದಲ್ಲಿ ವ್ಯತ್ಯಯ ಆಗದಿರುವುದು ರಕ್ಷಣಾ ಕಾರ್ಯಕ್ಕೆ ಸಹಕಾರಿಯಾಯಿತು.
ತನಿಖೆಗೆ ಆದೇಶ: ಮರವಂತೆ ಹೊರಬಂದರು ಕಾಮಗಾರಿ ಗುತ್ತಿಗೆ ಮುಗಿದು ಮೂರು ವರ್ಷವಾಗಿವೆ. ಈಗ ಬೋರ್‌ವೆಲ್ ದುರಸ್ತಿ ಮಾಡುತ್ತಿರುವ ಅಗತ್ಯದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ, ಕುಂದಾಪುರ ಡಿವೈಎಸ್‌ಪಿ ಅವರಿಗೆ ಸೂಚನೆ ನೀಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ. ಕುಂದಾಪುರ ಅಸಿಸ್ಟೆಂಟ್ ಕಮೀಷನರ್ ರಾಜು ಕೆ., ಕುಂದಾಪುರ ತಹಸೀಲ್ದಾರ್ ಎಚ್.ಕೆ. ತಿಪ್ಪೇಸ್ವಾಮಿ, ಬೈಂದೂರು ತಹಸೀಲ್ದಾರ್ ಬಸಪ್ಪ ಪೂಜಾರ್, ಕುಂದಾಪುರ ಪೊಲೀಸ್ ಉಪವಿಭಾಗದ ಎಎಸ್ಪಿ ಹರಿರಾಮ್ ಶಂಕರ್, ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸುರೇಶ ನಾಯ್ಕ, ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂದೀಪ್ ಜಿ.ಎಸ್., ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ದಿವಾಕರ ಖಾರ್ವಿ, ಜಿಪಂ ಮಾಜಿ ಅಧ್ಯಕ್ಷ ರಾಜು ಪೂಜಾರಿ ಸ್ಥಳಕ್ಕೆ ಭೇಟಿ ನೀಡಿದ್ದರು.