ಜಿಲ್ಲೆ

ಗೇಟ್​​ ಬಿದ್ದು ಬಾಲಕ ಸಾವು: ಇಂಜಿನಿಯರ್ ಅಮಾನತು

ಆರ್.ತುಳಸಿಕುಮಾರ್

ಬೆಂಗಳೂರು: ಆಟದ ಮೈದಾನದ ಗೇಟ್ ಬಿದ್ದು ಬಾಲಕ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ದತ್ತಾತ್ರೇಯ ದೇವಸ್ಥಾನ ವಾರ್ಡ್‌ನ ಸಹಾಯಕ ಇಂಜಿನಿಯರ್ ಟಿ.ಶ್ರೀನಿವಾಸರಾಜು ಅವರನ್ನು ಅಮಾನತುಗೊಳಿಸಿ ಬಿಬಿಎಂಪಿ ಆದೇಶಿಸಿದೆ.

2020-21ನೇ ಸಾಲಿನ ಉಪ ಮೇಯರ್ ಅನುದಾನದಡಿ 51 ಲಕ್ಷ ರೂ. ಮೊತ್ತದಲ್ಲಿ ದಿ.ರಾಜಾಶಂಕರ್ ಆಟದ ಮೈದಾನವನ್ನು ಅಭಿವೃದ್ಧಿಪಡಿಸಲಾಗಿತ್ತು. ಇದನ್ನು ಡಿ.ನರಹರಿ ಎಂಬ ಗುತ್ತಿಗೆದಾರನಿಗೆ ಕಾಗಾರಿ ವಹಿಸಲಾಗಿತ್ತು. ಘಟನೆ ಬಳಿಕ ಪ್ರಾಥಮಿಕ ಮಾಹಿತಿಯಂತೆ ಗೇಟಿನ ಸಾಮರ್ಥ್ಯಕ್ಕೆ ತಕ್ಕಂತೆ ಹಿಂಜಸ್ (ಕೀಲುಗಳು) ಅಳವಡಿಸಿರಲಿಲ್ಲ. ಜತೆಗೆ ನಿರ್ವಹಣೆ ಮಾಡದ ಕಾರಣ ತುಕ್ಕು ಹಿಡಿದ ಗೇಟ್ ಮುರಿದು ಬಿದ್ದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಸಹಾಯಕ ಇಂಜಿನಿಯರ್ ಕರ್ತವ್ಯಲೋಪ ಎಸೆಗಿರುವುದರಿಂದ ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತರು ಸೋಮವಾರ ಆದೇಶ ಹೊರಡಿಸಿದ್ದಾರೆ.

ಇಇಗೆ ನೋಟಿಸ್:

ಇದೇ ಪ್ರಕರಣ ಸಂಬಂಧ ಕಾಮಗಾರಿಯ ಬಿಲ್‌ಅನ್ನು ಅರ್ಧದಷ್ಟು ಇನ್ನೂ ಪಾವತಿಸದೆ ಬಾಕಿ ಇಟ್ಟುಕೊಂಡಿರುವ ವಿಚಾರವಾಗಿ ಕಾರ್ಯಪಾಲಕ ಅಭಿಯಂತರ ಎಲ್.ವೆಂಕಟೇಶ್ ಅವರಿಂದ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.

ಸಾವಿನಲ್ಲೂ ಸಾರ್ಥಕತೆ:

ಆಟದ ಮೈದಾನದ ಗೇಟ್ ಬಿದ್ದು ಮೃತಪಟ್ಟಿರುವ ಬಾಲಕ ನಿರಂಜನ್ ಕಣ್ಣುಗಳನ್ನು ಅವರ ಕುಟುಂಬದವರು ಆಸ್ಪತ್ರೆಯೊಂದಕ್ಕೆ ದಾನವಾಗಿ ನೀಡಿದ್ದಾರೆ. ಸಾವಿನಲ್ಲೂ ಬಾಲಕನ ಕುಟುಂಬವು ಸಾರ್ಥಕತೆ ಮೆರೆದಿದೆ.