ಜಿಲ್ಲೆ

ಕಬ್ಬು ತಿನ್ನುವ ಆಸೆಯಿಂದಾಗಿ ಪ್ರಾಣ ಕಳ್ಕೊಂಡ ಬಾಲಕ; ಟ್ರ್ಯಾಕ್ಟರ್​ ಅಡಿಗೆ ಸಿಲುಕಿ ಸಾವು...

ಬೆಳಗಾವಿ: ಈ ದುರಂತದ ವಿಡಿಯೋವನ್ನು ನೋಡಿದರೆ ಎಂಥವರ ಕರುಳು ಕೂಡ ಒಮ್ಮೆ ಚುರುಕ್ ಎನ್ನದೇ ಇರಲಾರದು. ಅಂಥ ದುರ್ಮರಣವಿದು. ಬರೀ ಒಂದು ಕಬ್ಬು ತಿನ್ನುವ ಆಸೆಯಿಂದಾಗಿ 8 ವರ್ಷದ ಬಾಲಕನೊಬ್ಬ ಪ್ರಾಣವನ್ನೇ ಕಳೆದುಕೊಳ್ಳುವಂತಾಗಿದೆ.

ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಅಮಟೂರು ಗ್ರಾಮದಲ್ಲಿ ನಿನ್ನೆ ಸಂಜೆಯ ಸುಮಾರಿಗೆ ಇಂಥದ್ದೊಂದು ಹೃದಯವಿದ್ರಾವಕ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ 8 ವರ್ಷದ ಅನಿಲ್ ಹಣಬರ್ ಎಂಬಾತ ಸಾವಿಗೀಡಾಗಿದ್ದಾನೆ.

ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಹಿಂದೆ ಓಡಿದ ಈ ಬಾಲಕ ಕಬ್ಬು ಎಳೆದುಕೊಳ್ಳುವ ಭರದಲ್ಲಿ ಬಿದ್ದು, ಟ್ರ್ಯಾಕ್ಟರ್​ ಚಕ್ರದಡಿಗೆ ಸಿಲುಕಿದ್ದಾನೆ. ಬಾಲಕನ ಸೊಂಟದ ಭಾಗದ ಮೇಲೆ ಚಕ್ರ ಹಾದು ಹೋಗಿದ್ದು, ಈತ ನರಳಿ ನರಳಿ ಸಾವಿಗೀಡಾಗಿದ್ದಾನೆ. ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಗಾಯಗೊಂಡ ಬಾಲಕ ನರಳಾಡುವ ವಿಡಿಯೋ ತುಣುಕು ಎಲ್ಲೆಡೆ ಹರಿದಾಡಿದ್ದು, ನೋಡುಗರನ್ನು ತೀವ್ರ ಬೇಸರಕ್ಕೆ ಈಡುಮಾಡುತ್ತಿದೆ. ಬೈಲಹೊಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ.