ಜಿಲ್ಲೆ

ಬಿಎಂಟಿಸಿ ಬಸ್​ಗೆ ಯುವಕ ಬಲಿ

Mandara

ಬೆಂಗಳೂರು: ಇಬ್ಬಲೂರು ಜಂಕ್ಷನ್ ಬಳಿ ಬಿಎಂಟಿಸಿ ವೋಲ್ವೋ ಬಸ್ ಹರಿದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.

ವಿಷ್ಣುತೀರ್ಥ (31) ಮೃತ ಯುವಕ. ಹಿಂಬದಿ ಸವಾರ ಸಾಯಿಕೃಷ್ಣ (26) ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರ (ಫೆ.17) ಮಧ್ಯಾಹ್ನ 12.50 ಗಂಟೆಗೆ ಬಿಎಂಟಿಸಿ ಬಸ್ ಎಚ್​ಎಸ್​ಆರ್ ಲೇಔಟ್​ನಿಂದ ಇಬ್ಬಲೂರು ಜಂಕ್ಷನ್ ಕಡೆಗೆ ಹೋಗುತ್ತಿತ್ತು. ರಾಯಲ್ ಎನ್​ಫೀಲ್ಡ್ ಮಳಿಗೆ ಮುಂಭಾಗ ರಸ್ತೆಯಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ದ್ವಿಚಕ್ರ ವಾಹನದಲ್ಲಿದ್ದ ಇಬ್ಬರೂ ಸವಾರರು ಕೆಳಗೆ ಬಿದ್ದಿದ್ದಾರೆ. ಆಗ ಬಸ್​ನ ಹಿಂದಿನ ಚಕ್ರ ವಿಷ್ಣುತೀರ್ಥ ಮೇಲೆ ಹರಿದಿದೆ. ಬಸ್ ಚಾಲಕ ಅಜಾಗರೂಕತೆ ಹಾಗೂ ಅತಿವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಬಸ್ ಚಾಲಕ ರಾಮಣ್ಣನನ್ನು ಬಂಧಿಸಿ ಬಿಎಂಟಿಸಿ ವೋಲ್ವೋ ಬಸ್ ಜಪ್ತಿ ಮಾಡಲಾಗಿದೆ ಎಂದು ಎಚ್​ಎಸ್​ಆರ್ ಲೇಔಟ್ ಸಂಚಾರ ಪೊಲೀಸರು ತಿಳಿಸಿದ್ದಾರೆ.