ಪಂಕಜ ಕೆ.ಎಂ. ಬೆಂಗಳೂರು
ಶಿಥಿಲಾವಸ್ಥೆ ತಲುಪಿರುವ ನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಹೊರ ರೋಗಿಗಳ ವಿಭಾಗ ಕೆಲವೇ ದಿನಗಳಲ್ಲಿ ತೆರವಾಗಲಿದ್ದು, ಆ ಸ್ಥಳದಲ್ಲಿ ಹತ್ತು ಅಂತಸ್ತಿನ ಬೃಹತ್ ಕಟ್ಟಡ ನಿರ್ಮಾಣ ಕಾರ್ಯಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಸುಮಾರು 297 ಕೋಟಿ ರೂ. ವೆಚ್ಚದ ಯೋಜನೆಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಲೋಕಸಭೆ ಚುನಾವಣೆ ಹಿನ್ನೆಲೆ ನೀತಿಸಂಹಿತೆ ಜಾರಿಯಲ್ಲಿದ್ದು, ಲಿತಾಂಶ ಬಂದ ಬಳಿಕ ಕಟ್ಟಡ ಕಾಮಗಾರಿಯ ಶಂಕು ಸ್ಥಾಪನೆ ನೆರವೇರಲಿದೆ.
ಕಾಮಗಾರಿ ಪೂರ್ಣಗೊಳಿಸಲು ಮೂರು ವರ್ಷಗಳ ಗಡುವು ನೀಡಲಾಗಿದ್ದು, 2027ರ ವೇಳೆಗೆ 500 ಹಾಸಿಗೆ ಸಾಮರ್ಥ್ಯದ ಅತ್ಯಾಧುನಿಕ ಸೌಕರ್ಯವುಳ್ಳ ಆಸ್ಪತ್ರೆ ಸೇವೆಗೆ ಸಿದ್ಧವಾಗಲಿದೆ. ಬೌರಿಂಗ್ ಆಸ್ಪತ್ರೆಯು ವೈದ್ಯಕೀಯ ಕಾಲೇಜಿನ ಸ್ಥಾನಮಾನ ಪಡೆದುಕೊಂಡ ನಂತರ ಭಾರತೀಯ ವೈದ್ಯಕೀಯ ಮಂಡಳಿಯ ಆದೇಶಗಳ ಪ್ರಕಾರ ಅವಶ್ಯಕತೆಗಳನ್ನು ಹೊಂದುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಈ ಕಟ್ಟಡ ಎಚ್‌ಎಬಿಎಚ್ ಮಾನ್ಯತೆಯ ಎಲ್ಲ ಮಾನದಂಡಗಳನ್ನು ಒಳಗೊಳ್ಳಲಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಡ್‌ಗಳ ಸಂಖ್ಯೆ 1,100ಕ್ಕೆ ಏರಿಕೆ: ಹತ್ತು ಅಂತಸ್ತಿನ ಕಟ್ಟಡ ಕಾಮಗಾರಿ ಮೂರು ಹಂತಗಳಲ್ಲಿ ನಡೆಯಲಿದೆ. ಮೊದಲನೇ ಹಂತದಲ್ಲಿ ತಳಮಹಡಿ, ನೆಲಮಹಡಿ, ಒಂದು ಮತ್ತು ಎರಡನೇ ಮಹಡಿಗಳನ್ನು ನಿರ್ಮಿಸಲಾಗುವುದು. ಇದರಲ್ಲಿ ಪಾರ್ಕಿಂಗ್ ಮತ್ತು ಹೊರ ರೋಗಿಗಳ ವಿಭಾಗ ನಿರ್ಮಾಣವಾಗಲಿದೆ. ಎರಡನೇ ಹಂತದಲ್ಲಿ 3-6ನೇ ಮಹಡಿವರೆಗೆ ನಿರ್ಮಾಣವಾಗಲಿದೆ. ಇಲ್ಲಿ ತುರ್ತು ನಿಗಾ ಘಟಕ, 11 ಶಸಚಿಕಿತ್ಸಾ ಕೊಠಡಿಗಳು, ವಿಶೇಷ ವಾರ್ಡ್‌ಗಳು ಇರಲಿವೆ. ಮೂರನೇ ಹಂತದಲ್ಲಿ 7ರಿಂದ 10ನೇ ಮಹಡಿವರೆಗೆ ನಿರ್ಮಾಣವಾಗಲಿದ್ದು, ಎಲ್ಲವೂ ವಾರ್ಡ್‌ಗಳನ್ನು ಹೊಂದಿರಲಿವೆ. ಇದರಿಂದ 60 ಐಸಿಯು ಹಾಸಿಗೆ ಸೇರಿ 500 ಹಾಸಿಗೆಗಳ ಸೌಲಭ್ಯ ದೊರೆಯಲಿದೆ. ಬೌರಿಂಗ್ ಆಸ್ಪತ್ರೆಯ ಒಟ್ಟು ಬೆಡ್‌ಗಳ ಸಂಖ್ಯೆ 1,100ಕ್ಕೆ ಏರಿಕೆಯಾಗಲಿದೆ.
ಐತಿಹಾಸಿಕ ಕಟ್ಟಡ: ಬೆಂಗಳೂರಿನ ಐತಿಹಾಸಿಗಳ ಕಟ್ಟಡಗಳ ಸಾಲಿನಲ್ಲಿ ಬೌರಿಂಗ್ ಆಸ್ಪತ್ರೆಯೂ ಒಂದು. ಈ ಹಿನ್ನೆಲೆಯಲ್ಲಿ ಬೌರಿಂಗ್ ಆಸ್ಪತ್ರೆಯ ಮೂಲ ಕಟ್ಟಡವನ್ನು ಹಾಗೆಯೇ ಉಳಿಸಿಕೊಂಡು, ಶಿಥಿಲಗೊಂಡಿರುವ ಇತರೆ ಕಟ್ಟಡಗಳನ್ನು ತೆರವುಗೊಳಿಸಿ ಆ ಜಾಗದಲ್ಲಿ ಹೊಸ ಆಸ್ಪತ್ರೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಆಸ್ಪತ್ರೆಗೆ ನಿತ್ಯ 1,400-1,500 ಹೊರ ರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಾರೆ. 300-400 ಮಂದಿ ದಾಖಲಾಗುತ್ತಾರೆ. ಹೊಸ ಕಟ್ಟಡ ನಿರ್ಮಾಣದಿಂದ ರೋಗಿಗಳಿಗೆ ಮತ್ತಷ್ಟು ಉತ್ತಮ ಹಾಗೂ ಗುಣಮಟ್ಟದ ಸೇವೆ ದೊರೆಯಲಿದೆ.
ಕೋಟ್:
ಹಳೆಯ ಕಟ್ಟಡ ತೆರವುಗೊಳಿಸುವ ಸಲುವಾಗಿ ಈಗಾಗಲೇ ಹೊರ ರೋಗಿಗಳ ವಿಭಾಗವನ್ನು ಪಕ್ಕದಲ್ಲೇ ಇರುವ ಮತ್ತೊಂದು ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತಿದ್ದು, ಈಗಿರುವ ಮುಖ್ಯ ದ್ವಾರದ ಬದಲಾಗಿ ರಸಲ್ ಮಾರುಕಟ್ಟೆ ಕಡೆಯಿಂದ ಆಸ್ಪತ್ರೆಗೆ ಪ್ರವೇಶ ಕಲ್ಪಿಸಲಾಗಿದೆ. ಮೂರು ವರ್ಷಗಳಲ್ಲಿ ನೂತನ ಕಟ್ಟಡ ಸೇವೆಗೆ ಲಭ್ಯವಾಗಲಿದ್ದು, ಅತ್ಯಾಧುನಿಕ ವೈದ್ಯಕೀಯ ಉಪಕರಣಗಳೊಂದಿಗೆ ಸೇವೆ ನೀಡಲಿದೆ.
-ಡಾ. ಮನೋಜ್ ಕುಮಾರ್, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ನಿರ್ದೇಶಕ