ಜಿಲ್ಲೆ

ರಸ್ತೆ ಮಧ್ಯೆಯೇ ಬೋರ್‌ವೆಲ್ ಕೊರೆಯಿಸಿದ ಭೂಪ !

ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಮನೆಗೆ ನೀರು ಪೂರೈಸಿಕೊಳ್ಳಲು ಸಾರ್ವಜನಿಕರು ಓಡಾಡುವ ರಸ್ತೆ ಮಧ್ಯೆಯೇ ಬೋರ್‌ವೆಲ್ ಕೊರೆಯಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ. ಈ ರಸ್ತೆಯು ಆತನ ಸ್ವಂತ ಜಾಗವಾಗಿರದೆ, ಪಾಲಿಕೆಗೆ ಸೇರಿದ್ದರೂ ಈತನ ಕುಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ರಾಜರಾಜೇಶ್ವರಿನಗರ ವಲಯದ ಹೇರೋಹಳ್ಳಿ ವಾರ್ಡ್‌ನ ವೀರಭದ್ರೇಶ್ವರನಗರದ ಓಂ ಸಾಯಿ ಪಬ್ಲಿಕ್ ಮುಖ್ಯರಸ್ತೆಯಲ್ಲಿ ಅನಧಿಕೃತವಾಗಿ ಬೋರ್‌ವೆಲ್ ಕೊರೆಯಿಸಲಾಗಿದೆ. ಕಳೆದ ಶುಕ್ರವಾರ (ಅ.4) ಇದನ್ನು ಗಮನಿಸಿದ ಕೆಲವರು ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ತಂದರು. ಸ್ಥಳೀಯ ಕಾರ್ಯನಿರ್ವಾಹಕ ಅಧಿಕಾರಿ (ಎಇಇ) ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ ವೇಳೆ ಬೋರ್‌ವೆಲ್ ಕೊರೆಯಿಸಿದ್ದಕ್ಕೆ ಆ ವ್ಯಕ್ತಿ ದಬಾಯಿಸಿದ್ದಾನೆ. ನಂತರ ಕೆಲ ನಾಗರಿಕರು ಸೇರಿ ಅಧಿಕಾರಿಯು ತರಾಟೆಗೆ ತೆಗೆದುಕೊಂಡಾಗ ಆತ ತೆಪ್ಪಗಾಗಿದ್ದಾನೆ. ಕೂಡಲೇ ಎಇಇ ಬಿ.ರಮೇಶ್ ತನ್ನ ಮೇಲಾಧಿಕಾರಿಗೆ ಮಾಹಿತಿ ರವಾನಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅನುಮತಿ ಪಡೆಯಲು ವಿಫಲ:

ನಗರ ವ್ಯಾಪ್ತಿಯಲ್ಲಿ ಯಾರೇ ಆದರೂ ಬೋರ್‌ವೆಲ್ ಕೊರೆಯಿಸುವ ಮುನ್ನ ಕಡ್ಡಾಯವಾಗಿ ಬಿಬಿಎಂಪಿಯಿಂದ ಅನುಮತಿ ಪಡೆಯಬೇಕು. ಆದರೆ, ಈ ವ್ಯಕ್ತಿ ಅನುಮತಿ ಪಡೆದಿರಲಿಲ್ಲ. ಜತೆಗೆ ರಸ್ತೆ ಮಧ್ಯೆ ಬೋರ್‌ವೆಲ್ ಕೊರೆಯಿಸಿ ಪಾಲಿಕೆಯ ರಸ್ತೆಯನ್ನು ಹಾಳು ಮಾಡಲಾಗಿದೆ ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರು ಆಧರಿಸಿ ಬ್ಯಾಡರಹಳ್ಳಿ ಠಾಣೆಯ ಪೊಲೀಸರು ಮೂವರು ಆರೋಪಿಗಳಾದ ಜಯರಾಜ್, ಧನರಾಜಯ್ಯ ಹಾಗೂ ಪ್ರಕಾಶ್ ಎಂಬುವವರ ವಿರುದ್ಧ ಪ್ರಥಮ ವರ್ತಮಾನ ವರದಿ (ಎಫ್​ಐಆರ್) ದಾಖಲಿಸಿದ್ದಾರೆ.

ದಂಡ ವಿಧಿಸಲು ಚಿಂತನೆ:

ಸಾರ್ವಜನಿಕ ರಸ್ತೆಯನ್ನು ಯಾರೂ ಕೂಡ ತಮ್ಮ ಸ್ವಂತಕ್ಕೆ ಬಳಸಿಕೊಳ್ಳುವುದು ಅಥವಾ ಹಾನಿ ಮಾಡುವಂತಿಲ್ಲ. ಹಾಲಿ ಪ್ರಕರಣದಲ್ಲಿ ರಸ್ತೆಯನ್ನು ಹಾಳು ಮಾಡಿ ಪಾಲಿಕೆ ನಷ್ಟ ಉಂಟು ಮಾಡಿರುವ ಹಿನ್ನೆಲೆಯಲ್ಲಿ ಬೋರ್‌ವೆಲ್ ಕೊರೆಯಿಸಿದ ಹಾಗೂ ಕೊಳವೆಬಾವಿ ಯಂತ್ರದ ಕಂಪನಿ ಮಾಲೀಕರಿಗೆ ದಂಡ ವಿಧಿಸಲು ಪಾಲಿಕೆ ಮುಂದಾಗಿದೆ. ಈ ಬಗ್ಗೆ ಇನ್ನಷ್ಟೇ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಪಾಲಿಕೆಯ ಹೇರೋಹಳ್ಳಿ ಉಪ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ರಸ್ತೆ ಮಧ್ಯೆಯೇ ಬೋರ್‌ವೆಲ್ ಕೊರೆಯಿಸಲು ಮುಂದಾದ ಘಟನೆ ನಮಗೆ ಅಚ್ಚರಿ ತಂದಿದೆ. ಆರೋಪಿಗಳ ವಿರುದ್ಧ ಈಗಾಗಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್​ಐಆರ್ ಕೂಡ ಆಗಿದೆ. ಅನಧಿಕೃತವಾಗಿ ರಸ್ತೆಯಲ್ಲಿ ಕೊಳವೆಬಾವಿ ಕೊರೆದಿದ್ದಕ್ಕೆ ಕಂಪನಿಗೆ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗುವುದು.

- ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತ