ಮಂಜುನಾಥ ಕೋಳಿಗುಡ್ಡ ಬೆಳಗಾವಿ
ಮಹಾರಾಷ್ಟ್ರ ಸರ್ಕಾರವು ಕರ್ನಾಟಕದ ಗಡಿಯೊಳಗಿನ 865 ಹಳ್ಳಿಗಳಲ್ಲಿರುವ ಮರಾಠಿ ಭಾಷಿಕರಿಗೆ ‘ಮಹಾತ್ಮ ುಲೆ ಜನಾರೋಗ್ಯ ಯೋಜನೆ’ ವಿಸ್ತರಣೆ ಬೆನ್ನಲ್ಲೆ ಇದೀಗ ಆರ್ಥಿಕ ಸಾಲ, ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸಲು ಮುಂದಾಗುವ ಮೂಲಕ ವಿವಾದದ ಕಿಡಿ ಹೊತ್ತಿಸಿದೆ.
ಗಡಿ ವಿವಾದಕ್ಕೆ ಒಳಪಟ್ಟ ಕರ್ನಾಟಕದ ಒಳಗಿರುವ ಬೆಳಗಾವಿ, ಕಾರವಾರ, ಕಲಬುರಗಿ, ಬೀದರ ಜಿಲ್ಲಾ ವ್ಯಾಪ್ತಿಯಲ್ಲಿರುವ 12 ತಾಲೂಕಿನ 865 ಹಳ್ಳಿಗಳು ತನ್ನದೆಂದು ಪ್ರತಿಪಾದಿಸಲು ಮಹಾರಾಷ್ಟ್ರದ ಸರ್ಕಾರದ ಬಳಿ ಪ್ರಬಲವಾದ ಸಾಕ್ಷಿ ಆಧಾರಗಳು ಇಲ್ಲ. ಈ ಹಿನ್ನೆಲೆ ಮರಾಠಿ ಭಾಷಿಕರನ್ನು ಸೆಳೆಯುವುದು, ಸುಪ್ರೀಂ ಕೋರ್ಟ್‌ಗೆ ಬೇಕಾದ ಅಧಿಕೃತ ದಾಖಲೆಗಳನ್ನು ಸೃಷ್ಟಿಸಿಕೊಳ್ಳುವ ಉದ್ದೇಶದಿಂದ ಸಾಲ ಸೌಲಭ್ಯ, ಆರ್ಥಿಕ ಸಹಾಯಧನ, ಸರ್ಕಾರಿ ಉದ್ಯೋಗ ಸೌಲಭ್ಯ ಯೋಜನೆ ಆದೇಶ ಮಾಡುವ ಮೂಲಕ ಹೊಸ ವಿವಾದ ಸೃಷ್ಟಿಸಿದೆ.
ಮಹಾರಾಷ್ಟ್ರದಲ್ಲಿ ನಡೆದಿರುವ ತಲಾಟಿ ಹುದ್ದೆಗಳ ನೇಮಕಾತಿಯಲ್ಲಿ ಕರ್ನಾಟದೊಳಗಿನ ಮರಾಠಿಗರನ್ನೂ ಪರಿಗಣಿಸಬೇಕು. ಗಡಿಯಲ್ಲಿ ಉದ್ಯೋಗ ಆಕಾಂಕ್ಷಿಗಳಿಗಾಗಿ ಪರೀಕ್ಷಾ ಕೇಂದ್ರಗಳನ್ನು ಆರಂಭಿಸಬೇಕು. ಕೌಶಲ ಅಭಿವೃದ್ಧಿ ಕೇಂದ್ರ, ವಿವಿಧ ಯೋಜನೆಗಳ ಅಡಿಯಲ್ಲಿ ಆರ್ಥಿಕ ಸಹಾಯಧ, ಸಾಲ ಸೌಲಭ್ಯ ಕಲ್ಪಿಸಲು ಅವರಿಗೆ ಅವಕಾಶ ಕಲ್ಪಿಸಿಕೊಡುವ ಕುರಿತು ನಿರ್ಧರಿಸಿದೆ ಎಂದು ಪರಿಷತ್ ಕಲಾಪದಲ್ಲಿ ಮಹಾರಾಷ್ಟ್ರ ಕಂದಾಯ ಸಚಿವ ಚಂದ್ರಶೇಖರ್ ಭವನಕುಲೆ ಅವರು ಗಡಿ ವಿವಾದ ಹಾಗೂ ಅಲ್ಲಿನ ಸಮಸ್ಯೆಗಳ ಕುರಿತು ಭಾಷಣ ವೇಳೆ ತಿಳಿಸಿದ್ದಾರೆ.
ಅಂತ್ಯೋದಯ ಆಹಾರ ಯೋಜನೆ, ಅನ್ನಪೂರ್ಣ ಪಡಿತರ ಚೀಟಿ ಹೊಂದಿರುವವರು ಮಹಾತ್ಮ ುಲೆ ಜನಾರೋಗ್ಯ ಯೋಜನೆ ಪ್ರಯೋಜನೆಗಳನ್ನು 865 ಹಳ್ಳಿಗಳಲ್ಲಿ ಮರಾಠಿಗರು ಪಡೆಯುತ್ತಿದ್ದಾರೆ. ಇದು ಗಡಿಯಲ್ಲಿನ ಮರಾಠಿ ಭಾಷಿಕರನ್ನು ಬಡಿದೆಬ್ಬಿಸಿದ್ದು, ಕರ್ನಾಟಕ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಕನ್ನಡ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಸಚಿವರು, ಅಧ್ಯಕ್ಷರು, ಅಧಿಕಾರಿಗಳು ಮೌನ: ಕಳೆದ ನಾಲ್ಕೈದು ವರ್ಷಗಳ ಅವಧಿಯಲ್ಲಿ ಮಹಾರಾಷ್ಟ್ರ ಸರ್ಕಾರವು ಕರ್ನಾಟಕದ ಗಡಿಯೊಳಗಿನ 865 ಹಳ್ಳಿಗಳಲ್ಲಿರುವ ಮರಾಠಿ ಭಾಷಿಕರಿಗೆ ಪರೋಕ್ಷವಾಗಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಿಕೊಡುತ್ತಿದೆ. ಈಗ ಉದ್ಯೋಗ, ಶಿಕ್ಷಣ, ಆರ್ಥಿಕ ಸೌಲಭ್ಯ ಕಲ್ಪಿಸಲು ಮುಂದಾಗಿದ್ದರೂ ಕರ್ನಾಟಕ ಸರ್ಕಾರ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಗಡಿ ಸಂರಕ್ಷಣಾ ಆಯೋಗ, ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳು, ಸಚಿವರು, ಶಾಸಕರು ಪ್ರಶ್ನಿಸುವ ಬದಲು ಮೌನಕ್ಕೆ ಶರಣಾಗಿದ್ದಾರೆ. ಇವರಿಂದ ಗಡಿಭಾಗದ ಹಳ್ಳಿಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗಲಿದೆ ಎಂದು ಕನ್ನಡ ಪರ ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಏನೇನು ಸೌಲಭ್ಯ?: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಗಡಿ ಮರಾಠಿ ಭಾಷಿಕರಿಗೆ ಪ್ರತ್ಯೇಕ ವಿಶ್ವವಿದ್ಯಾಲಯ. ಸರ್ಕಾರಿ, ಖಾಸಗಿ ಉದ್ಯೋಗದಲ್ಲಿ ಗಡಿ ಮರಾಠಿ ಭಾಷಿಕರಿಗೆ ಮೀಸಲಾತಿ ಸೌಲಭ್ಯ. ಮಹಾರಾಷ್ಟ್ರ ಸರ್ಕಾರದ ವಿವಿಧ ಯೋಜನೆಯಡಿ ಆರ್ಥಿಕ ಸಹಾಯಧನ, ಸಾಲ ಸೌಲಭ್ಯ. ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡುವುದು. ಮಹಾತ್ಮ ುಲೆ ಜನಾರೋಗ್ಯ ಯೋಜನೆ
ಬೆಳಗಾವಿ, ಕಾರವಾರ, ಕಲಬುರಗಿ, ಬೀದರ ಜಿಲ್ಲಾ ವ್ಯಾಪ್ತಿಯಲ್ಲಿರುವ 12 ತಾಲೂಕಿನ 865 ಹಳ್ಳಿಗಳು ತನ್ನದೆಂದು ವಾದಿಸಲು ಮಹಾರಾಷ್ಟ್ರ ಸರ್ಕಾರ ಸಾಕ್ಷಿಗಳನ್ನು ಸೃಷ್ಟಿಸಿಕೊಳ್ಳುತ್ತಿದೆ. ಇಲ್ಲಿನ ಮರಾಠಿ ಭಾಷಿಕರನ್ನು ತನ್ನತ್ತ ಸೆಳೆದುಕೊಳ್ಳಲು ಸೌಲಭ್ಯ ಕಲ್ಪಿಸುತ್ತಿದೆ. ಆದರೂ ಮಹಾಸರ್ಕಾರದ ನಡೆ ಪ್ರಶ್ನಿಸುವವರು ಇಲ್ಲದಂತಾಗಿದೆ. ಸರ್ಕಾರ, ಪ್ರಾಧಿಕಾರಿಗಳ ಅಧ್ಯಕ್ಷರಲ್ಲಿ ಗಂಭೀರತೆ ಇಲ್ಲ. | ಅಶೋಕ ಚಂದರಗಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾಸಮಿತಿ ಅಧ್ಯಕ್ಷ, ಬೆಳಗಾವಿ