ಕಾಸರಗೋಡು: ಗಡಿನಾಡ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಕನ್ನಡಿಗರ ನಿಯೋಗವೊಂದು ಮಂಗಳವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ತಿರುವನಂತಪುರದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ನೇತೃತ್ವದಲ್ಲಿ ಭೇಟಿ ನಡೆಯಿತು. ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಪ್ರಾಧಿಕಾರ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಕನ್ನಡಪರ ಸಂಘಟನೆ ಸದಸ್ಯರು ಉಪಸ್ಥಿತರಿದ್ದರು.
ನಾಡೋಜ ಡಾ.ಕಯ್ಯರ ಕಿಞಣ್ಣ ರೈ ಕನ್ನಡ ಸಾಂಸ್ಕೃತಿಕ ಭವನ ಉದ್ಘಾಟನೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಆಹ್ವಾನ ನೀಡಲಾಯಿತು. ಕೇರಳ ವಿಧಾನಸಭೆ ಸ್ಪೀಕರ್ ಎ.ಎನ್.ಶಂಸೀರ್, ಪ್ರತಿಪಕ್ಷ ಮುಖಂಡ ವಿ.ಡಿ.ಸತೀಶನ್ ಅವರನ್ನೂ ನಿಯೋಗ ಭೇಟಿ ಮಾಡಿತು.
ಕಾಸರಗೋಡು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ನಾಮಫಲಕ ಅಳವಡಿಸಬೇಕು. ಕೇರಳದ ಸರ್ಕಾರಿ ಸೇವೆಗಳಲ್ಲಿ ಭಾಷಾ ಅಲ್ಪಸಂಖ್ಯಾತರಿಗೆ ಕಾನೂನಾತ್ಮಕ ರೀತಿ ನೇಮಕಾತಿ ನೀಡಬೇಕು. ಪಡಿತರ ಚೀಟಿ, ಮತದಾರರ ಪಟ್ಟಿಯಲ್ಲಿ ಕನ್ನಡವನ್ನೂ ಅಳವಡಿಸಬೇಕು. ಬದಿಯಡ್ಕ ಪೆರಡಾಲದ ಡಾ.ಕಯ್ಯರ ಕಿಞಣ್ಣ ರೈ ಕನ್ನಡ ಭವನಕ್ಕೆ ಸರ್ವಋತು ಸಂಪರ್ಕ ರಸ್ತೆ ಕಲ್ಪಿಸಬೇಕು. ಸಾಂಸ್ಕೃತಿಕ ಸಂಸ್ಥೆಗಳಿಗೆ ಅನುದಾನ ಒದಗಿಸಬೇಕು. ಕಾಸರಗೋಡು ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಗಳಿಗೆ ಕಡ್ಡಾಯವಾಗಿ ಕನ್ನಡಬಲ್ಲ ಶಿಕ್ಷಕರನ್ನೇ ನೇಮಿಸಬೇಕು. ಡಾ.ಪ್ರಭಾಕರನ್ ಸಮಿತಿ ವರದಿ ಅನುಷ್ಠಾನ, ಕಾಸರಗೋಡಿನ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು ಇತ್ಯಾದಿ ಬೇಡಿಕೆ ಸಲ್ಲಿಸಲಾಯಿತು.