ಜಿಲ್ಲೆ

ರಾಹುಲ್ ಗಾಂಧಿ ವಿರುದ್ಧ ಬೋಪಯ್ಯ ಆಕ್ರೋಶ

ಮಡಿಕೇರಿ:

ಹಿಂದೂಗಳ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಲೋಕಸಭೆಯಲ್ಲಿ ಮಾತನಾಡಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ ದೇಶದ ಮತ್ತು ಹಿಂದೂಗಳ ಕ್ಷಮೆ ಕೇಳಬೇಕು ಎಂದು ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಒತ್ತಾಯಿಸಿದ್ದಾರೆ. ಕಳೆದ ೨ ಅವಧಿಯಲ್ಲಿ ಕಾಂಗ್ರೆಸ್‌ಗೆ ಪ್ರತಿಪಕ್ಷ ನಾಯಕ ಸ್ಥಾನ ಇರಲಿಲ್ಲ. ಈ ಬಾರಿ ಅವಕಾಶ ಸಿಕ್ಕಿದೆ. ಪ್ರತಿಪಕ್ಷ ನಾಯಕ ಎಂದರೆ ಛಾಯಾ ಪ್ರಧಾನಿಯ ಸ್ಥಾನವಿದೆ. ಈ ಜವಾಬ್ದಾರಿ ಅರಿತುಕೊಂಡು ಮಾತನಾಡಬೇಕು. ಟೀಕೆಗಳು ಗುಣಾತ್ಮಕವಾಗಿ ಇರಬೇಕು. ಆದರೆ ರಾಹುಲ್ ಗಾಂಧಿ ಹಿಂದೂಗಳ ಅವಹೇಳನ ಮಾಡಿ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ. ರಾಹುಲ್ ಗಾಂಧಿ ಅವರ ಮಾತುಗಳು ಖೇದಕರ. ಧರ್ಮದ ಅವಹೇಳನ ಖಂಡನಾರ್ಹ. ಅವರು ಇನ್ನಾದರೂ ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಲಿ. ಧರ್ಮವನ್ನು ಟೀಕೆ ಮಾಡುವುದು ಸರಿಯಲ್ಲ. ತಿದ್ದಿಕೊಂಡು ನಡೆಯಲಿ. ಇಲ್ಲದಿದ್ದರೆ ಅವರ ವಿರುದ್ಧ ತಮ್ಮ ಪಕ್ಷದಿಂದ ಆಂದೋಲ ನಡೆಸಬೇಕಾದೀತು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ ವಿರೋಧ ಪಕ್ಷದ ನಾಯಕನಾಗಿರುವ ರಾಹುಲ್ ಗಾಂಧಿಗೆ ಯಾವ ವಿಷಯದ ಬಗ್ಗೆ ಮಾತನಾಡಬೇಕು ಎನ್ನುವುದರ ಅರಿವು ಇಲ್ಲ. ದೇಶದ ವಿಚಾರದಲ್ಲಿ ಸಲಹೆ ಕೊಡುವುದು ಬಿಟ್ಟು ಬೇರೆ ಎಲ್ಲಾ ಮಾತನಾಡಿದ್ದಾರೆ. ಇದು ಭಾರತ. ಹಿಂದೂ ದೇಶ. ಆಗಿನ ಕಾಂಗ್ರೆಸ್ ನಾಯಕರೇ ಪಾಕಿಸ್ತಾನ, ಹಿಂದೂಸ್ತಾನ ಎಂದು ವಿಭಜನೆ ಮಾಡಿದ್ದಾರೆ. ಇದರ ಅರಿವಿಲ್ಲದ ರಾಹುಲ್ ಗಾಂಧಿ ಗಿಣಿ ಭವಿಷ್ಯ ಹೇಳುವ ರೀತಿಯಲ್ಲಿ ಒಂದೊಂದೇ ದೇವರ ಫೋಟೋ ತೆಗೆದು ಮಾತನಾಡಿದ್ದಾರೆ. ಸಂಕಷ್ಟ ಪರಿಹರಿಸುವವನು ಶಿವ ಎನ್ನುವುದು ಹಿಂದೂಗಳ ನಂಬಿಕೆ. ಆದರೆ ಶಿವನ ಹಾವು, ತ್ರಿಶೂಲದ ಬಗ್ಗೆ ಟೀಕೆ ಮಾಡಲಾಗಿದೆ. ಹಿಂದೂ ಧರ್ಮ ಎಂದರೆ ಹಿಂಸೆ ಎಂದು ಬಿಂಬಿಸಲಾಗಿದೆ. ಹಿಂದುತ್ವವನ್ನು ತೆಗಳುವುದು ಸಹಿಸಲು ಸಾಧ್ಯವಿಲ್ಲ. ಹಿಂದೂಗಳ ಬಗ್ಗೆ ಅಭಿಮಾನ ಇಲ್ಲದಿದ್ದರೆ ಹಿಂದೂ ಸ್ಥಾನದಲ್ಲಿ ಇರುವುದು ಬೇಡ. ರಾಹುಲ್ ಗಾಂಧಿ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರ ಅರುಣ್ ಕುಮಾರ್, ನಗರ ಮಂಡಲ ಅಧ್ಯಕ್ಷ ಮನು ಮಂಜುನಾಥ್, ಪ್ರಮುಖರಾದ ಸಜೀಲ್ ಕೃಷ್ಣ ಇದ್ದರು.