ಮಡಿಕೇರಿ:
ವಿಧಾನಸಭಾ ಸ್ಪೀಕರ್ ಆಗಿದ್ದ ಕೆ.ಜಿ. ಬೋಪಯ್ಯ ಸೋಲಿನ ಹಿಂದಿರಬಹುದಾದ ಕಾರಣಗಳ ಬಗ್ಗೆ ಬಿಜೆಪಿಯೊಳಗೆ ಅನೌಪಚಾರಿಕವಾಗಿ ಆಳವಾದ ಪೋಸ್ಟ್ ಮಾರ್ಟಂ ನಡೆಯುತ್ತಿದೆ. ಪಕ್ಷಕ್ಕೆ ಮತಗಟ್ಟೆವಾರು ಬಿದ್ದಿರುವ ಮತಗಳನ್ನು ಲೆಕ್ಕಹಾಕಿ ಆಗಿರಬಹುದಾದ ಲೋಪಗಳ ಬಗ್ಗೆ ಮುಖಂಡರು ಚರ್ಚೆ ನಡೆಸುತ್ತಿದ್ದಾರೆ. ವಿರಾಜಪೇಟೆ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ೪ ಬಾರಿಯ ಎಂಎಲ್‌ಎ ಬೋಪಯ್ಯ ಗೆಲುವಿನ ಬಗ್ಗೆ ಪಕ್ಷದಲ್ಲಿ ದೊಡ್ಡ ಮಟ್ಟದ ವಿಶ್ವಾಸ ಇತ್ತು. ಆದರೆ ಪ್ರಸ್ತುತ ಸೋಲು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗದ ಸತ್ಯವಾಗಿ ಉಳಿದುಕೊಂಡಿದೆ.
ಅಂಚೆ ಮತ ಹೊರತುಪಡಿಸಿ ವಿರಾಜಪೇಟೆಯಲ್ಲಿ ಚಲಾವಣೆಯಾದ ಒಟ್ಟು ೧,೬೫,೯೭೪ ಮತಗಳ ಪೈಕಿ ೭೮,೩೯೭ ಮತಗಳು ಕೆ.ಜಿ. ಬೋಪಯ್ಯ ಅವರಿಗೆ ಬಂದಿದೆ. ಹಾಲಿ ಶಾಸಕ ಎ.ಎಸ್. ಪೊನ್ನಣ್ಣ ೮೩,೧೨೮ ಮತಗಳನ್ನು ಗಳಿಸಿದ್ದಾರೆ. ಇಬ್ಬರಿಗೂ ಸಿಕ್ಕಿರುವ ಅಂಚೆ ಮತಗಳನ್ನು ಬಿಟ್ಟರೆ ಬೋಪಯ್ಯ ಅವರಿಗಿಂತ ಪೊನ್ನಣ್ಣ ೪,೭೩೧ ಮತಗಳನ್ನು ಹೆಚ್ಚು ಪಡೆದಿದ್ದಾರೆ. ಮಡಿಕೇರಿ ತಾಲೂಕಿನಲ್ಲಿ ಪೊನ್ನಣ್ಣ ಅವರಿಗಿಂತ ಬೋಪಯ್ಯ ೩,೬೨೪ ಹೆಚ್ಚು ಮತಗಳನ್ನು ತೆಗೆದುಕೊಂಡರೆ. ಇವರಿಗೆ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನಲ್ಲಿ ಹಿನ್ನಡೆ ಆಗಿದೆ. ವಿರಾಜಪೇಟೆ ತಾಲೂಕಿನಲ್ಲಿ ಪೊನ್ನಣ್ಣ ಅವರಿಗಿಂತ ೭,೯೨೭ ಕಡಿಮೆ ಮತಗಳು ಬೋಪಯ್ಯ ಅವರಿಗೆ ಬಂದರೆ, ಪೊನ್ನಂಪೇಟೆ ತಾಲೂಕಿನಲ್ಲಿ ೪೨೮ ಮತಗಳು ಬೋಪಯ್ಯ ಅವರಿಗೆ ಕಡಿಮೆ ಆಗಿದೆ.
ಹಾಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ವಿರಾಜಪೇಟೆ ತಾಲೂಕಿನವರು. ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ಆಯ್ಕೆ ಆಗಿರುವ ಸುಜಾ ಕುಶಾಲಪ್ಪ ಕೂಡ ಇದೇ ತಾಲೂಕಿನವರು. ಬಿಜೆಪಿಯ ಈ ಇಬ್ಬರು ಪ್ರಭಾವಿಗಳು ವಿರಾಜಪೇಟೆ ತಾಲೂಕಿನಲ್ಲಿ ಇದ್ದರೂ ಉಳಿದೆರಡು ತಾಲೂಕುಗಳಿಗಿಂತ ಬೋಪಯ್ಯ ಇಲ್ಲಿ ಭಾರಿ ಹಿನ್ನಡೆ ಅನುಭವಿಸಲು ಕಾರಣ ಏನು ಎನ್ನುವುದರ ಬಗ್ಗೆ ಈಗ ಪಕ್ಷದೊಳಗೆ ಬಿಸಿ ಬಿಸಿ ಚರ್ಚೆ ಆಗುತ್ತಿದೆ. ಇದಕ್ಕೆ ’ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಪ್ರಭಾವ’, ’ಹೊಸ ಮುಖಗಳನ್ನು ಮತದಾರ ಬಯಸಿದ್ದ’… ಹೀಗೆ ಒಂದೊಂದಾಗಿ ಕಾರಣಗಳನ್ನು ಪಟ್ಟಿ ಮಾಡಿದರೂ, ಮಡಿಕೇರಿ ತಾಲೂಕಿನಲ್ಲಿ ಬೋಪಯ್ಯ ಅವರಿಗೆ ಹೇಗೆ ಹೆಚ್ಚು ಮತ ಬಂತು ? ಪೊನ್ನಂಪೇಟೆಯಲ್ಲಿ ಇಬ್ಬರ ಮಧ್ಯೆ ಅಂತರ ಯಾಕೆ ಅಷ್ಟು ಕಡಿಮೆ ಆಯಿತು ? ಎನ್ನುವ ಪ್ರಶ್ನೆಗಳು ಹುಟ್ಟಿಕೊಳ್ಳುತ್ತದೆ.
ಬಿಜೆಪಿ ಪರಿಧಿಯಿಂದಾಚೆಗೆ ಒಂದಾದ ಒಂದು ಪ್ರಬಲ ಸಮುದಾಯ ಮತ್ತೊಂದು ಪ್ರಬಲ ಸಮುದಾಯಕ್ಕೆ ಸೇರಿದ ಬೋಪಯ್ಯ ವಿರುದ್ಧ ಮತಗಳನ್ನು ಕ್ರೋಢೀಕರಿಸಿದ್ದರಿಂದ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನಲ್ಲಿ ಬಿಜೆಪಿಗೆ ಇಂತಹ ಪರಿಸ್ಥಿತಿ ಎದುರಾಯಿತು ಎನ್ನುವ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ನಡೆದಿದೆ. ಬೋಪಯ್ಯ ವಿರುದ್ಧ ಒಂದಾದ ಸಮುದಾಯದ ಪ್ರಬಲ ನಾಯಕರು ಬಿಜೆಪಿಯಲ್ಲಿ ಇದ್ದರೂ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಇದರಿಂದ ಬೋಪಯ್ಯ ಸೋಲುತ್ತಾರೆ, ಪಕ್ಷಕ್ಕೆ ಹಿನ್ನಡೆ ಆಗುತ್ತದೆ ಎನ್ನುವ ಮಾಹಿತಿ ಇದ್ದರೂ ಎಚ್ಚೆತ್ತುಕೊಳ್ಳದೆ ನಿರ್ಲಕ್ಷ್ಯ ವಹಿಸಿದರು ಎಂದು ಬಿಜೆಪಿಯಲ್ಲೇ ಆರೋಪ ಕೇಳಿಬರುತ್ತಿದೆ.
ಪಕ್ಷದಲ್ಲಿ ಆಂತರಿಕವಾಗಿ ನಡೆಯುತ್ತಿರುವ ಅನೌಪಚಾರಿಕ ಅವಲೋಕನ ಸಂದರ್ಭ ವಿರಾಜಪೇಟೆಯಲ್ಲಿ ಬಿಜೆಪಿ ಸೋಲಿಗೆ ತಾಲೂಕಿನ ಕೆಲವು ಪ್ರಭಾವಿ ನಾಯಕರೇ ಕಾರಣ ಎನ್ನುವುದು ಬಿಂಬಿತವಾಗುತ್ತಿದೆ. ಕೆ.ಜಿ. ಬೋಪಯ್ಯ ಅಭಿಮಾನಿಗಳು ಕೂಡ ಇಂತಹ ನಾಯಕರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಬೋಪಯ್ಯ ಅವರಿಂದ ಎಲ್ಲಾ ರೀತಿಯಲ್ಲಿ ಸಹಕಾರ ಪಡೆದುಕೊಂಡವರೇ ಅವರಿಗೆ ದ್ರೋಹ ಮಾಡಿದರು ಎನ್ನುವ ಆಕ್ರೋಶದ ಮಾತುಗಳು ಸಾಮಾನ್ಯವಾಗಿದೆ.
ಕಾರ್ಯಕರ್ತರಿಗೆ ಧೈರ್ಯ ತುಂಬುವ ರೀತಿಯಲ್ಲಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಹಾಕುತ್ತಿರುವ ಬಿಜೆಪಿಯ ಪ್ರಮುಖರೊಬ್ಬರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಒಂದಿಲ್ಲೊಂದು ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಆದರೆ ಮಡಿಕೇರಿ ತಾಲೂಕಿನ ಕೆಲವು ಗ್ರಾಮಗಳಿಗೆ ತಾವಾಗಿಯೇ ಹೋಗಿ ಗೊಂದಲ ಸೃಷ್ಟಿಸುವ ಮಾತನ್ನಾಡಿ ಬೋಪಯ್ಯ ಅವರಿಗೆ ಬರಬೇಕಿದ್ದ ಮತಗಳಿಗೂ ಅಡ್ಡಗಾಲು ಹಾಕಿದರು ಎಂದು ಬೋಪಯ್ಯ ಆತ್ಮೀಯರು ಆರೋಪಿಸುತ್ತಾರೆ. ಇಷ್ಟಾದರೂ ಮಡಿಕೇರಿ ತಾಲೂಕಿನಲ್ಲಿ ಉಳಿದೆರಡು ತಾಲೂಕುಗಳಿಗೆ ಹೋಲಿಸಿದರೆ ಹಾಲಿ ಶಾಸಕರಿಗಿಂತ ಹೆಚ್ಚು ಮತ ಪಡೆದಿದ್ದಾರೆ ಎಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ.