ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಬೆಂಗಳೂರು ಮತ್ತು ಮೈಸೂರು ಭೇಟಿ ರಾಜ್ಯ ಬಿಜೆಪಿ ಪಾಲಿಗೆ ಬೂಸ್ಟರ್ ಡೋಸ್ ಆಗುವ ನಿರೀಕ್ಷೆ ಇದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಮೋದಿ ಮೊದಲ ಬಾರಿಗೆ ರಾಜ್ಯಕ್ಕೆ ಬರುತ್ತಿದ್ದು, ರಾಜಕೀಯ ವಸ್ತುಸ್ಥಿತಿ ಕುರಿತು ‘ಗ್ರೌಂಡ್ ರಿಪೋರ್ಟ್’ ಪಡೆಯುವ ಸಾಧ್ಯತೆಗಳಿವೆ.
ಹೊಸ ಯೋಜನೆಗಳು, ಜನಪರ ಕಾರ್ಯಕ್ರಮಗಳ ಜಾರಿ ಮೂಲಕ ಸರ್ಕಾರ ಮತ್ತು ಪಕ್ಷದ ವರ್ಚಸ್ಸು ವೃದ್ಧಿಗೆ ರಾಜ್ಯ ನಾಯಕರು ಹೆಣಗಾಡುತ್ತಿದ್ದರೂ ನಿರೀಕ್ಷಿತ ಫಲ ಸಿಕ್ಕಿಲ್ಲ. ಒಂದಿಲ್ಲೊಂದು ಆರೋಪಗಳು, ಹಿಜಾಬ್, ಪಠ್ಯಪುಸ್ತಕಗಳ ಪರಿಷ್ಕರಣೆ ಇತ್ಯಾದಿ ವಿವಾದಗಳು ತಡೆಗೋಡೆಯಾಗಿದ್ದು, ಮೋದಿ ಭೇಟಿ ಇವುಗಳನ್ನು ಸರಿಪಡಿಸಲಿದೆ ಎಂಬ ವಿಶ್ವಾಸ ಬಿಜೆಪಿ ನಾಯಕರಲ್ಲಿದೆ.
ರಾಜ್ಯಸಭೆ ಚುನಾವಣೆಯಲ್ಲಿ ಮೂರು ಸ್ಥಾನಗಳ ಗೆಲುವಿನ ಖುಷಿಯನ್ನು ವಿಧಾನ ಪರಿಷತ್ ಚುನಾವಣೆ ಕಸಿದುಕೊಂಡಿದೆ. ಗ್ರಾಮೀಣ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಕ್ಷೇತ್ರಗಳ ಸೋಲಿನ ಕಹಿ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳಲ್ಲೂ ಮರುಕಳಿಸಿದೆ. ಆಂತರಿಕ ಸಮಸ್ಯೆಗಳೇ ಹಿನ್ನಡೆಗೆ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಪ್ರಧಾನಿ ಮೋದಿ ಈ ಎಲ್ಲ ಅಂಶಗಳನ್ನು ಅವಲೋಕಿಸಲಿದ್ದು, ಕಾರ್ಯಕರ್ತರಲ್ಲೂ ಹುಮ್ಮಸ್ಸು ತುಂಬಲಿದೆ ಎನ್ನುವುದು ಸಂಘಟನೆಯ ಲೆಕ್ಕಾಚಾರವಾಗಿದೆ.
ಮುಖ್ಯ ಕಾರ್ಯದರ್ಶಿ ಪರಾಮರ್ಶೆ: ಕೊಮ್ಮಘಟ್ಟದಲ್ಲಿ ನಡೆಯಲಿರುವ ಸಾರ್ವಜನಿಕ ಸಮಾರಂಭ ಸೇರಿ ಪ್ರಧಾನಿಯವರು ಪಾಲ್ಗೊಳ್ಳಲಿರುವ ಮೂರು ಕಾರ್ಯಕ್ರಮಗಳ ಸಿದ್ಧತೆಗಳ ಉನ್ನತಮಟ್ಟದ ಪರಿಶೀಲನಾ ಸಭೆ ಭಾನುವಾರ ನಡೆಯಿತು. ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರು ವಿವಿಧ ಇಲಾಖೆಗಳ ಉನ್ನತಮಟ್ಟದ ಅಧಿಕಾರಿಗಳ ಸಭೆ ನಡೆಸಿ, ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ಜತೆಗೆ ಎಸ್ಪಿಜಿ ಸೂಚನೆ ಪ್ರಕಾರ ಮಾಡಿರುವ ಏರ್ಪಾಟುಗಳನ್ನು ಪರಾಮಶಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಎರಡು ದಿನಗಳ ರಾಜ್ಯ ಪ್ರವಾಸಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ವಿಶ್ವ ಯೋಗ ದಿನಾಚರಣೆಯೇ ಮೋದಿಯವರ ಮುಖ್ಯ ಕಾರ್ಯಕ್ರಮ ವಾಗಿದ್ದು, ಅದರೊಂದಿಗೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜೋಡಿಸಲಾಗಿದೆ. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ