ಶ್ರೀರಂಗಪಟ್ಟಣದ ಶ್ರೀರಂಗ ವೇದಿಕೆಯಲ್ಲಿ ನಾಡಹಬ್ಬ ದಸರಾ ಪ್ರಯುಕ್ತ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ಬುಧವಾರ ಹಮ್ಮಿಕೊಳ್ಳಲಾಗಿದ್ದ ರೈತ ದಸರಾ ಕಾರ್ಯಕ್ರಮದ ಕಿಸಾನ್ ಗೋಷ್ಠಿಯಲ್ಲಿ ಸಾಧಕ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ಡಾ.ಕೇಶವಯ್ಯ, ಡಾ.ಸಿದ್ದಪ್ಪ, ಡಾ.ಚನ್ನೇಗೌಡ, ಅಶೋಕ್, ರೂಪಶ್ರೀ, ಸುರೇಶ್, ಬಾಬಾಸಾಬ್, ಪುಟ್ಟಸ್ವಾಮಿ ಇದ್ದರು. 
ಜಿಲ್ಲೆ

ಸಾವಯವ ಬೆಲ್ಲ ಬಳಸಿ ಆರೋಗ್ಯ ವೃದ್ಧಿಸಿಕೊಳ್ಳಿ

ಎಂ.ರವಿ

ಶ್ರೀರಂಗಪಟ್ಟಣ: ಜನರು ಆರೋಗ್ಯದ ಹಿತದೃಷ್ಟಿಯಿಂದ ಸಾವಯವ ಬೆಲ್ಲವನ್ನು ಬಳಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಎಂದು ವಿ.ಸಿ. ಫಾರಂನ ಬೆಲ್ಲದ ಪಾರ್ಕ್ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ಕೇಶವಯ್ಯ ತಿಳಿಸಿದರು.

ಶ್ರೀರಂಗಪಟ್ಟಣ ದಸರಾ ಪ್ರಯುಕ್ತ ಮೂರನೇ ದಿನವಾದ ಬುಧವಾರ ಶ್ರೀರಂಗನಾಥಸ್ವಾಮಿ ಮೈದಾನದ ಆವರಣದ ಶ್ರೀರಂಗ ವೇದಿಕೆಯಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ರೈತ ದಸರಾ ಕಾರ್ಯಕ್ರಮದ ಕಿಸಾನ್ ಗೋಷ್ಠಿಯಲ್ಲಿ ಮಾತನಾಡಿದರು.

ಬೆಲ್ಲವನ್ನು ಆಹಾರ ಮತ್ತು ಔಷಧವಾಗಿ ಶತಮಾನಗಳಿಂದಲೂ ಬಳಸಲಾಗುತ್ತಿದ್ದು, ಖಾದ್ಯವನ್ನು ಸಿಹಿಯಾಗಿಸುವ ಜತೆಗೆ ಆರೋಗ್ಯವನ್ನು ಕೂಡ ಸಿಹಿಯಾಗಿಸುತ್ತದೆ. ಬೆಲ್ಲವು ದೇಹದ ತೂಕ ಇಳಿಸಿಕೊಳ್ಳಲು, ಹೊಟ್ಟೆಯ ಸಮಸ್ಯೆಯನ್ನು ಶಮನ ಮಾಡಿಕೊಳ್ಳಲು ಬಳಸಲಾಗುತ್ತದೆ. ಇದರಲ್ಲಿರುವ ಪೌಷ್ಟಿಕ ಸತ್ವಗಳು ರೋಗ ನಿರೋಧಕ ಶಕ್ತಿ ಹೊಂದಿದೆ. ರಕ್ತ ಮತ್ತು ಶ್ವಾಸಕೋಶವನ್ನು ನಿರ್ವಿಷಗೊಳಿಸುವುದಲ್ಲದೆ, ಶ್ವಾಸಕೋಶದ ದಕ್ಷತೆಯನ್ನು ಹೆಚ್ಚಿಸುತ್ತದೆ. ಬೆಲ್ಲ ವಿಶೇಷವಾಗಿ ಉಸಿರಾಟದ ಸಮಸ್ಯೆ ತಡೆಗಟ್ಟಲು ಸಾಕಷ್ಟು ಪ್ರಯೋಜನಕಾರಿಯಾಗಿದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವುದರಿಂದ ಮಧುಮೇಹ ಹೊಂದಿರುವವರು ಸಕ್ಕರೆಯ ಬದಲಾಗಿ ಬೆಲ್ಲವನ್ನು ಸೇವನೆ ಮಾಡಿದರೆ ಆರೋಗ್ಯ ಉತ್ತಮವಾಗಿರುತ್ತದೆ ಎಂದರು.

ತೋಟಗಾರಿಕೆ ಮಹಾವಿದ್ಯಾಲಯದ ಸಹಾಯಕ ಪ್ರದ್ಯಾಪಕ ಡಾ.ಸಿದ್ದಪ್ಪ ಮಾತನಾಡಿ, ಉತ್ತಮ ಗುಣಮಟ್ಟದ ರೇಷ್ಮೆ ಬೆಳೆಯನ್ನು ಬೆಳೆಯಬೇಕಾದರೆ ರೈತರು ಕೃಷಿ ಜಮೀನುಗಳನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದು ಮತ್ತು ಗೊಬ್ಬರ ಬಳಸುವ ವಿಧಾನ ಜತೆಗೆ ಸಾವಯವ ಗೊಬ್ಬರವನ್ನು ರೈತರೇ ಉತ್ಪಾದಿಸಿಕೊಳ್ಳುವುದರಿಂದ ಇಳುವರಿ ಪಡೆಯಬಹುದು. ಚಂದ್ರಿಕೆಗಳ ಆಧುನೀಕರಣ ಮತ್ತು ರೇಷ್ಮೆಯ ಹಿಪ್ಪುನೇರಳೆ ಬೆಳೆಯುವುದು, ಕೀಟನಾಶಕಗಳ ಸಿಂಪಡಿಕೆಗಳನ್ನು ಎಚ್ಚರಿಕೆಯಿಂದ ಬಳಸುವ ಕುರಿತು ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಆತ್ಮ ಯೋಜನೆಯಲ್ಲಿ ಗುರುತಿಸಿಕೊಂಡಿದ್ದ 7 ಸಾಧಕ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ಪಶು ಆಹಾರ ತಜ್ಞ ಡಾ.ಚನ್ನೇಗೌಡ ಎಚ್.ಕೆ.ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೂಪಶ್ರೀ, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಡಾ.ಸುರೇಶ್, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಬಾಬಾಸಾಬ್, ರೇಷ್ಮೆ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ, ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್ ಹಾಗೂ ಸಮಾಜ ಕಲ್ಯಾಣಾಧಿಕಾರಿ ಸಿದ್ದಲಿಂಗೇಶ್ ಸೇರಿದಂತೆ ಇತರ ಅಧಿಕಾರಿಗಳು ಹಾಜರಿದ್ದರು.