ಜಿಲ್ಲೆ

ಚಾರ್ಜಿಂಗ್ ಕೇಂದ್ರದಲ್ಲಿ ಬುಕಿಂಗ್: ಬೆಸ್ಕಾಂನಿಂದ ಶೀಘ್ರ ಜಾರಿ, ಆಪ್ ಮೂಲಕ ಮಾಹಿತಿ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಸಿನಿಮಾ, ಬಸ್, ವಿಮಾನ, ರೈಲು ಟಿಕೆಟ್ ರೀತಿಯಲ್ಲೇ ವಿದ್ಯುತ್​ಚಾಲಿತ ವಾಹನಗಳಿಗೆ ವಿದ್ಯುತ್ ಮರುಪೂರಣಕಾಗಿ ಎಲೆಕ್ಟ್ರಿಕ್ ಚಾರ್ಜಿಂಗ್ ಕೇಂದ್ರಗಳಲ್ಲಿ ಸ್ಥಳವನ್ನು ಮುಂಗಡವಾಗಿ ಕಾಯ್ದಿರಿಸುವ ವ್ಯವಸ್ಥೆ ಶೀಘ್ರದಲ್ಲೇ ಜಾರಿಗೆ ಬರಲಿದೆ. ಬೆಂಗಳೂರಿನಾದ್ಯಂತ ಬೆಸ್ಕಾಂ ಸ್ಥಾಪಿಸಲಿರುವ 126 ಚಾರ್ಜಿಂಗ್ ಕೇಂದ್ರಗಳಲ್ಲಿ ಈ ಸೌಕರ್ಯ ಇರಲಿದೆ.

ಪರಿಸರಮಾಲಿನ್ಯ ತಡೆಯಲು ಇಂಧನ ಆಧಾರಿತ ವಾಹನಗಳ ಬದಲಿಗೆ ವಿದ್ಯುತ್​ಚಾಲಿತ ವಾಹನಗಳ ಬಳಕೆಗೆ ಒತ್ತು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ದೇಶದ ಬೇರೆ ರಾಜ್ಯಗಳಿಗಿಂತ ಸದ್ಯ ಕರ್ನಾಟಕದಲ್ಲೇ ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳಿವೆ. ಅದಕ್ಕಾಗಿ ಮುಂದಿನ ಎರಡ್ಮೂರು ವರ್ಷದಲ್ಲಿ ರಾಜ್ಯವನ್ನು ಎಲೆಕ್ಟ್ರಾನಿಕ್ ವಾಹನ ಹಬ್ ಮಾಡಲು ಪಣ ತೊಟ್ಟಿದೆ. ಅದಕ್ಕಾಗಿ ರಾಜ್ಯದಲ್ಲಿ ಎಲೆಕ್ಟ್ರಾನಿಕ್ ವಾಹನ ಬಳಕೆಗಾಗಿ ಪ್ರತ್ಯೇಕ ನೀತಿ ಜಾರಿ ಮಾಡಲಾಗಿದೆ. ಅದರಲ್ಲೂ ಪ್ರಮುಖವಾಗಿ ಬೆಂಗಳೂರಿನಲ್ಲಿ ಹೆಚ್ಚಿನ ವಾಹನ ಬಳಕೆ ಕುರಿತಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಅದರಂತೆ ಮೊದಲಿಗೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಅನುಕೂಲವಾಗುವಂತೆ 126 ಕಡೆ ಚಾರ್ಜಿಂಗ್ ಕೇಂದ್ರ ಸ್ಥಾಪಿಸಲಾಗಿದೆ. ಶೀಘ್ರದಲ್ಲಿ ಅದನ್ನು ಉದ್ಘಾಟಿಸಲಾಗುತ್ತಿದೆ.

ಆಪ್ ಮೂಲಕ ಮಾಹಿತಿ: ನೂತನವಾಗಿ ಸ್ಥಾಪಿಸಲಾಗಿರುವ ಕೇಂದ್ರಗಳು ವಾಹನ ಮಾಲೀಕರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಹಲವು ಕ್ರಮ ಕೈಗೊಳ್ಳಲಾಗಿದೆ. ಬೆಸ್ಕಾಂ ಅಭಿವೃದ್ಧಿಪಡಿಸಿರುವ ‘ಎಲೆಕ್ಟ್ರಿಫೈ’ ಮೊಬೈಲ್ ಅಪ್ಲಿಕೇಷನ್ ಮೂಲಕ ತಮ್ಮ ಬಳಿಯ ಚಾರ್ಜಿಂಗ್ ಕೇಂದ್ರಗಳ ಮಾಹಿತಿ ಪಡೆಯಬಹುದಾಗಿದೆ. ಅದರ ಜತೆಗೆ ತಾವು ಹೋಗಬಯಸುವ ಚಾರ್ಜಿಂಗ್ ಕೇಂದ್ರದಲ್ಲಿ ಬೇರೆ ವಾಹನಗಳಿವೆಯೇ ಅಥವಾ ಖಾಲಿಯಿದೆಯೇ ಎಂಬುದನ್ನು ಮೊಬೈಲ್ ಆಪ್ ಮೂಲಕವೇ ತಿಳಿದುಕೊಳ್ಳಬಹುದು.

ಒಟಿಪಿ ಬಳಸಿ ಚಾರ್ಜ್ ಮಾಡಿ: ಹೀಗೆ ಮುಂಗಡ ಕಾಯ್ದಿರಿಸಿದ ಕೇಂದ್ರಗಳಿಗೆ ತೆರಳಿ ವಾಹನ ಚಾರ್ಜ್ ಮಾಡುವುದಕ್ಕೂ ಮುನ್ನ ಒನ್ ಟೈಂ ಪಾಸ್​ವರ್ಡ್ (ಒಟಿಪಿ) ನಮೂದಿಸಿಬೇಕಿದೆ. ಅದಕ್ಕಾಗಿ ಆಪ್​ನಲ್ಲಿ ವಾಹನ ಮಾಲೀಕರು ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಬೇಕು. ಅದಕ್ಕೆ ಬೆಸ್ಕಾಂನಿಂದ ಒಟಿಪಿ ಬರಲಿದ್ದು, ಅದನ್ನು ಆಪ್​ನಲ್ಲಿ ನಮೂದಿಸಿದರೆ ಮಾತ್ರ ಚಾರ್ಜ್ ಮಾಡಲು ಸಾಧ್ಯವಾಗಲಿದೆ. ನಂತರ ಆಪ್ ಮೂಲಕ ಶುಲ್ಕ ಪಾವತಿಸಬಹುದಾಗಿದೆ. ಅದಾದ ನಂತರ ಎಲೆಕ್ಟ್ರಾನಿಕ್ ರಸೀದಿ ಕೂಡ ವಾಹನ ಮಾಲೀಕರಿಗೆ ಲಭ್ಯವಾಗಲಿದೆ.

1 ಕಿ.ಮೀ.ಗೆ 1 ರೂಪಾಯಿ ವೆಚ್ಚ: ಬೆಸ್ಕಾಂ ಅಧಿಕಾರಿಗಳು ಹೇಳುವಂತೆ ಪೆಟ್ರೋಲಿಯಂ ಉತ್ಪನ್ನಗಳಿಂದ ಚಲಿಸುವ ವಾಹನಗಳಲ್ಲಿ ಸಂಚರಿಸಲು ಪ್ರತಿ ಕಿ.ಮೀ.ಗೆ 3ರಿಂದ 5 ರೂ. ವ್ಯಯಿಸಬೇಕಾಗುತ್ತದೆ. ಆದರೆ, ಎಲೆಕ್ಟ್ರಿಕ್ ವಾಹನಗಳಲ್ಲಿ ಕೇವಲ 1 ರೂ. ಖರ್ಚಾಗುತ್ತದೆ.

ನಗರದಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆ ಹೆಚ್ಚಿಸುವುದು ಮತ್ತು ವಾಹನಗಳ ಅನುಕೂಲಕ್ಕಾಗಿ 126 ಕಡೆ ಚಾರ್ಜಿಂಗ್ ಕೇಂದ್ರ ಸ್ಥಾಪಿಸಲಾಗಿದೆ. ಶೀಘ್ರದಲ್ಲಿ ಅದನ್ನು ಉದ್ಘಾಟಿಸಲಾಗುವುದು. ಎಲ್ಲ ಕೇಂದ್ರಗಳು ಆಟೋಮ್ಯಾಟಿಕ್ ಆಗಿ ಕಾರ್ಯನಿರ್ವಹಿಸಲಿವೆ. | ಸಿ.ಕೆ.ಶ್ರೀನಾಥ್ ಬೆಸ್ಕಾಂ ಸ್ಮಾರ್ಟ್ ಗ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನ ವಿಭಾಗದ ಡಿಜಿಎಂ

1 ಯೂನಿಟ್​ಗೆ 8 ರೂಪಾಯಿ

ಬೆಸ್ಕಾಂ ನಿರ್ಧರಿಸಿರುವಂತೆ ವಾಹನಗಳ ಚಾರ್ಜ್ ಮಾಡಿಕೊಂಡಿದ್ದಕ್ಕೆ ಪ್ರತಿ ಯೂನಿಟ್ ವಿದ್ಯುತ್​ಗೆ 8 ರೂ. ಶುಲ್ಕ ವಿಧಿಸಲಾಗುತ್ತದೆ. ವಾಹನಗಳ ಬಳಕೆ ಆಧರಿಸಿ ಮುಂದೆ ದರ ಪರಿಷ್ಕರಿಸಲು ಬೆಸ್ಕಾಂ ಚಿಂತನೆ ನಡೆಸಿದೆ.