ಮಂಡ್ಯ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶದ ಪರಂಪರೆ ಹಾಗೂ ರಾಷ್ಟ್ರಾಭಿಮಾನವನ್ನು ಎತ್ತಿ ಹಿಡಿದಿದೆ ಎಂದು ಆರ್‌ಎಸ್‌ಎಸ್ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಹೇಳಿದರು.
ನಗರದ ಪಿಇಎಸ್ ಪದವಿ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯ, ರಾಷ್ಟ್ರ ವಿಕಾಸ ಚಾರಿಟಬಲ್ ಟ್ರಸ್ಟ್ ಮಂಡ್ಯ ಮತ್ತು ಜಿಲ್ಲಾ ಭಾರತ ಸಾಹಿತ್ಯ ಪರಿಷದ್ ಸಹಯೋಗದೊಂದಿಗೆ ಸೋಮವಾರ ಆಯೋಜಿಸಿದ್ದ ‘ರಾಷ್ಟ್ರ ತಪಸ್ವಿ ಶ್ರೀ ಗುರೂಜಿ ಪುಸ್ತಕ ಲೋಕಾರ್ಪಣೆ’ ಸಮಾರಂಭದಲ್ಲಿ ಮಾತನಾಡಿದರು. ಆರ್‌ಎಸ್‌ಎಸ್ ಎಂದೂ ವ್ಯಕ್ತಿ ಪೂಜೆಗೆ ಮಣೆ ಹಾಕಿಲ್ಲ. ಅದರ ಅವಶ್ಯಕತೆಯೂ ಇಲ್ಲ. ವ್ಯಕ್ತಿಯಲ್ಲಿ ನಾನು ಅನಿವಾರ್ಯ ಎಂಬ ಅಹಂ ಬರಬಾರದು. ಜಗತ್ತನ್ನು ಒಂದೂಗೂಡಿಸುವ ಶಕ್ತಿ ಧರ್ಮಕ್ಕಿದ್ದು, ಹಿಂದೂ ಧರ್ಮವನ್ನು ಪಾಲಿಸುವ ಭಾರತೀಯರು ಮಾನವ ಧರ್ಮದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದ ಕೀರ್ತಿಗೆ ಭಾಜನರಾಗುತ್ತಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೀರಾವರಿ ಇಲಾಖೆ ನಿವೃತ್ತ ಅಧೀಕ್ಷಕ ಇಂಜಿನಿಯರ್ ಕೆ.ಜೆ.ವಿಜಯ್‌ಕುಮಾರ್ ವಹಿಸಿದ್ದರು. ಪಾಂಡವಪುರದ ಬೇಬಿಬೆಟ್ಟದ ಶ್ರೀ ರಾಮಯೋಗೀಶ್ವರಿ ಮಠದ ಪೀಠಾಧಿಪತಿ ಶಿವ ಬಸವಸ್ವಾಮೀಜಿ, ಆರ್‌ಎಸ್‌ಎಸ್ ನಗರ ಸಂಚಾಲಕ ಸುರೇಶ್ ಇತರರಿದ್ದರು.