ಮೈಸೂರು: ಪಠ್ಯ ಮಾದರಿಯ ಶಿಕ್ಷಣದಿಂದ ಹೊರಬಂದು ಹೊಸತನ ಹಾಗೂ ಸಂಶೋಧನಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಅವಶ್ಯಕತೆ ಇದೆ ಎಂದು ಹಿರಿಯ ಜಾನಪದ ವಿದ್ವಾಂಸ ಪ್ರೊ.ಹಿ.ಶಿ.ರಾಮಚಂದ್ರೇಗೌಡ ಹೇಳಿದರು.
ಮಹಾರಾಜ ಕಾಲೇಜಿನ ಜೂನಿಯರ್ ಬಿಎ ಹಾಲ್‌ನಲ್ಲಿ ಪ್ರೊ.ನಂ.ಶಿವರಾಮು ರಚನೆಯ ‘ಜನಪದ-ಜಾನಪದ’ ಕೃತಿ ಬಿಡುಗಡೆ ಮಾಡಿ ಮಾತನಾಡಿ, ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯ ಅವಶ್ಯಕತೆ ಇದೆ. ಶಿಕ್ಷಣದಲ್ಲಿ ಹೊಸತನ ಹಾಗೂ ಸಂಶೋಧನೆಗೆ ಒತ್ತು ನೀಡದೆ ಇದ್ದರೆ ಯುವಸಮುದಾಯ ಸದೃಢವಾಗಿ ತಮ್ಮ ಬದುಕು ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಅಮೆರಿಕದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬಂದತಕ್ಷಣ ಅವರನ್ನು ಕ್ಷೇತ್ರ ಕರ್ತವ್ಯಕ್ಕೆ ನಿಯೋಜನೆ ಮಾಡಿ ಅವರಿಗೆ ಹೊಸತನ್ನು ಕಲಿಯಲು ಪ್ರೋತ್ಸಾಹ ನೀಡಲಾಗುತ್ತದೆ. ನಮ್ಮಲ್ಲೂ ಅಂತಹ ವ್ಯವಸ್ಥೆ ಬರಬೇಕಾಗಿದೆ ಎಂದರು.
ಜಾನಪದಕ್ಕೆ ಯಾವುದೇ ಜಾತಿ ಧರ್ಮ ಇಲ್ಲ. ಅದು ಯಾರನ್ನೂ ದೂರ ಮಾಡುವುದಿಲ್ಲ. ಎಲ್ಲರನ್ನು ಒಳಗೊಳ್ಳುವುದೇ ಜಾನಪದ. ಪುರುಷರು ಮಾತ್ರ ಜಾನಪದ ಕಲಾವಿದರಾಗಲು ಸಾಧ್ಯ ಎಂಬ ಕಲ್ಪನೆ ಇಂದು ದೂರವಾಗಿ ಸಾಕಷ್ಟು ಮಹಿಳೆಯರು ಇಂದು ಜಾನಪದ ಕಲಾರಂಗಕ್ಕೆ ಪ್ರವೇಶಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಾರಾಜ ಕಾಲೇಜು ಪ್ರಾಂಶುಪಾಲ ಪ್ರೊ.ಎಲ್. ಸೋಮಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಆಡಳಿತಾಧಿಕಾರಿ ವಿ.ಷಣ್ಮುಗಂ, ಜಾನಪದ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್.ಚೇತನ, ಪ್ರಾಧ್ಯಾಪಕರಾದ ಪ್ರೊ.ವಿಜಯಲಕ್ಷ್ಮೀ ಮನಾಪುರ, ಡಾ.ಜಯಲಕ್ಷ್ಮೀ ಸೀತಾಪುರ, ಮೈಲಹಳ್ಳಿ ರೇವಣ್ಣ, ಇಫ್ರೊ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಡಾ.ಎಂ. ಭೈರೇಗೌಡ ಹಾಗೂ ಇತರರು ಇದ್ದರು.