ಮೈಸೂರು: ಮೊಬೈಲ್ ಯುಗದಲ್ಲಿರುವ ಯುವಪೀಳಿಗೆ ಕಲೆ, ಸಂಸ್ಕೃತಿ, ಸಾಹಿತ್ಯದ ಕಡೆ ಗಮನಹರಿಸುತ್ತಿಲ್ಲ ಎಂದು ಚಾಮರಾಜನಗರ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಂ.ಆರ್. ಗಂಗಾಧರ್ ವಿಷಾದಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಸ್ವಜನ್ಯ ಕಲಾ ವೇದಿಕೆ, ಮಾಧ್ಯಮರಂಗ ಫೌಂಡೇಷನ್ ವತಿಯಿಂದ ವಿಜಯನಗರದ ಸಾಹಿತ್ಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎಸ್. ಶಿಶಿರಂಜನ್ ರಚನೆಯ ‘ನವಭಾರತ ಜನನಿಯ ತನುಜಾತೆ’ ಕವನ ಸಂಕಲನ ಹಾಗೂ ನಾಗೇಶ ತಳವಾರ ರಚನೆಯ ‘ಚಿಮಣಿ ಬೆಳಕಿನ ಬದುಕು’ ನಾಟಕ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ಭಾವನಾತ್ಮಕ ಬುದ್ಧಿಮತ್ತೆ, ಸಂವಹನ ಕೌಶಲ್ಯಕ್ಕೆ ಸಾಹಿತ್ಯ, ನಾಟಕ ಬೇಕು. ಪಠ್ಯಕ್ರಮದಲ್ಲಿ ಕೂಡ ಇವನ್ನು ಸೇರಿಸಬೇಕು ಎಂದು ಶಿಫಾರಸು ಮಾಡಿದ್ದೇವೆ. ಯುವಪೀಳಿಗೆ ಪುಸ್ತಕ ಓದುವುದನ್ನು, ನಾಟಕ ನೋಡುವುದನ್ನು ಕಡಿಮೆ ಮಾಡಿದ್ದಾರೆ ಎಂದರು.
ಸಂಶೋಧನೆಗಳು ಕೂಡ ಸರಿಯಾಗಿ ನಡೆಯುತ್ತಿಲ್ಲ. ಗೂಗಲ್ ನೋಡಿಕೊಂಡು ಕಟ್ ಆ್ಯಂಡ್ ಪೇಸ್ಟ್ ಮಾಡುತ್ತಿದ್ದಾರೆ. ಇದು ತಪ್ಪಬೇಕು. ಕೃತಿಗಳನ್ನು ಓದುವುದರಿಂದ ನೆನಪಿನ ಶಕ್ತಿ ಕೂಡ ಹೆಚ್ಚುತ್ತದೆ ಎಂದರು.
ವಿಮರ್ಶಕ ಡಾ.ಎಚ್.ಎಸ್. ಸತ್ಯನಾರಾಯಣ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಡಾ.ವಿಜಯಕುಮಾರಿ ಎಸ್. ಕರಿಕಲ್, ಮಂಗಳೂರು ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಎಸ್‌ಬಿಎಂ ಪ್ರಸನ್ನ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಚೀಲೂರು ಚಂದ್ರಶೇಖರ, ಸಿಂದಗಿ ಮಾಧ್ಯಮರಂಗ ಫೌಂಡೇಷನ್ ಉಪಾಧ್ಯಕ್ಷ ಪ್ರಕಾಶ ಏಳುಗುಡ್ಡ, ಕೃತಿಕಾರರಾದ ಎಸ್. ಶಿಶಿರಂಜನ್, ನಾಗೇಶ ತಳವಾರ ಇದ್ದರು.