ಜಿಲ್ಲೆ

ಮಾನಸಿಕ ಮಡಿವಂತಿಕೆ ಮೀರಿದರೆ ಮತ್ತೊಂದು ಕೃತಿ ಒಳ ಹೊಕ್ಕಲು ಸಾಧ್ಯ: ನಾಡೋಜ ಬರಗೂರು ರಾಮಚಂದ್ರಪ್ಪ

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಮಾನಸಿಕ ಮಡಿವಂತಿಕೆಯನ್ನು ಮೀರಿದಾಗ ಮಾತ್ರ ನಾವು ಮತ್ತೊಂದು ಕೃತಿಯ ಒಳ ಹೊಕ್ಕಲು ಸಾಧ್ಯ ಎಂದು ಹಿರಿಯ ಸಾಹಿತಿ, ನಾಡೋಜ ಬರಗೂರು ರಾಮಚಂದ್ರಪ್ಪ ಹೇಳಿದರು.

ನಗರದ ವಿವಿಯ ಸರ್ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಝೆನ್ ಟೀಮ್ ಹಾಗೂ ವಿಶ್ವವಿದ್ಯಾಲಯದ ಡಾ. ಡಿ. ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಬಿ.ಆರ್.ಜಯರಾಮರಾಜೇ ಅರಸು ಅವರ ಅನುವಾದಿತ ಕೃತಿ ‘ಹೆಣ ಹೊರುವವನ ವೃತ್ತಾಂತ’ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಿಘಂಟಿನ ಆಧಾರದ ಮೇಲೆ ಭಾಷಾಂತರ ಮಾಡಿದರೆ ಅದು ಶುಷ್ಕ ಕೃತಿಯಾಗುತ್ತದೆ. ಮೂಲ ಕೃತಿಯ ಭಾವ ಮತ್ತು ಸಾಮಾಜಿಕ, ಸಾಂಸ್ಕೃತಿಕ ಪರಿಸರ ಅಸ್ಮಿತೆಯನ್ನು ಇಟ್ಟುಕೊಂಡು ಒಂದು ಕೃತಿಯ ಅನುವಾದ ಮಾಡಬೇಕು. ಮಾನಸಿಕ ಮಡಿವಂತಿಕೆಯನ್ನು ಮೀರದಿದ್ದರೆ ದಲಿತ, ಮುಸ್ಲಿಂ, ಸ್ತ್ರೀ ಸಂವೇದನೆ ಅರ್ಥವಾಗುವುದಿಲ್ಲ. ಭಾಷಾಂತರನಿಗೆ ಜನಸಾಮಾನ್ಯರ ಬದುಕಿನಲ್ಲಿ ಬರುವ ಭಾಷಾ ಜಾಯಮಾನವು ಚೆನ್ನಾಗಿ ಅರ್ಥವಾದಲ್ಲಿ ಬೇರೊಂದು ಕೃತಿಯ ಸಾಮಾಜಿಕ, ಸಾಂಸ್ಕೃತಿಯನ್ನು ಕನ್ನಡ ಜಾಯಮಾನಕ್ಕೆ ಕಟ್ಟಿಕೊಡಲಿಕ್ಕೆ ಸಾಧ್ಯವಾಗಲಿದೆ. ಒಂದು ವಿಷಯ, ವಸ್ತು ಹಾಗೂ ಭಾಷೆಯನ್ನು ನಮ್ಮದನ್ನಾಗಿಸಿಕೊಳ್ಳುವುದರ ಮೂಲಕ ಒಂದು ಭಾಷೆ ಬೆಳೆಯುತ್ತದೆ ಎಂದರು.

ಸಾಮಾಜಿಕ ಸಂವೇದನೆ ಎಲ್ಲ ಸಾಹಿತಿಗಳಲ್ಲಿಯೂ ಇರಬೇಕು. ಸಾಮಾಜಿಕ, ಪರಿಸರ ಅಸ್ಮಿತೆಯನ್ನು ಆಧರಿಸಿ ಭಾಷಾಂತರಿಸಿದಾಗ ಮಾತ್ರ ಕೃತಿಗೆ ಸಾಮಾಜಿಕ ಸಾಂಸ್ಕೃತಿಕ ಪ್ರೇರಣಾಶಕ್ತಿ ಬರಲಿದೆ. ಜಯರಾಮರಾಜೇ ಅರಸು ಅವರು ನೀತಿ-ನಿಯಮಗಳ ಸಮನ್ವಯಕಾರರು. ನಿಯಮವನ್ನು ನೀತಿಯ ಮಡಿಲಿಗೆ ಒಪ್ಪಿಸಿ ಸಾಮಾಜಿಕ ಕಾರ್ಯಗಳನ್ನು ಮಾಡಿದವರು. ಸಾಮಾಜಿಕತೆಯ ಬೇರು ಬರೆವಣಿಗೆಯಲ್ಲಿ ಬೆರೆತಾಗ ಮಾತ್ರ ಇಂತಹ ಕೃತಿ ಹುಟ್ಟಲು ಸಾಧ್ಯ ಎಂದು ತಿಳಿಸಿದರು.

ತುಮಕೂರು ವಿವಿ ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ನಮಗೆಲ್ಲಾ ಆದರ್ಶಪ್ರಾಯರೆನಿಸಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಬಿ. ಆರ್. ಜಯರಾಮರಾಜೇ ಅರಸು ಅವರು ನಮ್ಮ ವೃತ್ತಿ ಜೀವನದ ಆದರ್ಶವೆನಿಸಿದ್ದಾರೆ. ಉತ್ತಮ ಆಡಳಿತಕ್ಕೆ ಜಯರಾಮರಾಜೇ ಅರಸು ಅವರು ಮಾದರಿಯಾಗಿದ್ದಾರೆ. ಹೆಣ ಹೊರುವವನ ವೃತ್ತಾಂತ ಕೃತಿಯಲ್ಲಿ ಹೆಣ ಹೊರುವ ಪದ್ಧತಿಯ ವಿಸೃತ ರೂಪ ತಿಳಿಸಿದ್ದಾರೆ ಎಂದು ಹೇಳಿದರು.

ಕೃತಿಯ ಲೇಖಕ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಬಿ.ಆರ್.ಜಯರಾಮರಾಜೇ ಅರಸು ಮಾತನಾಡಿ, ಹೆಣ ಹೊರುವವನ ವೃತ್ತಾಂತ ಕೃತಿಯಲ್ಲಿ ಬರುವ ಪ್ರತಿಯೊಂದು ಪಾತ್ರ ಮತ್ತು ಸಂಗತಿಗಳ ಬಗ್ಗೆ ಅರ್ಥಪೂರ್ಣವಾಗಿ ವಿವರಿಸಿದರು. ಅನುವಾದ ಮಾಡುವಾಗ ಯಾವ ಯಾವ ರೀತಿ ಅಧ್ಯಯನ ಮಾಡಿದ್ದರು, ನವ್ಯ ಪದಗಳ ಸಂಗ್ರಹಣೆ ಹೇಗೆ ಸಂಗ್ರಹಿಸಲಾಯಿತು ಎಂದು ತಿಳಿಸಿದರು.

ತುಮಕೂರು ವಿವಿಯ ಡಾ. ಡಿ. ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥೆ ಪ್ರೊ. ಅಣ್ಣಮ್ಮ , ಸಹಾಯಕ ಪ್ರಾಧ್ಯಾಪಕಿ ಡಾ. ಗೀತಾ ವಸಂತ ಉಪಸ್ಥಿತರಿದ್ದರು. ಝೆನ್ ಟೀಮ್ ಮುಖ್ಯಸ್ಥ, ಹಿರಿಯ ಪತ್ರಕರ್ತ ಉಗಮ ಶ್ರೀನಿವಾಸ್ ಸ್ವಾಗತಿಸಿದರು. ಸಂಚಾಲಕ ಕೆ.ಪಿ.ಲಕ್ಷ್ಮೀಕಾಂತರಾಜೇ ಅರಸ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.