ವಿರಾಜಪೇಟೆ: ಸಮಾಜ ಉಳಿಯಬೇಕಾದರೆ ನಾಗರಿಕತೆಯು ಉಳಿಯುವುದು ಅತ್ಯಂತ ಪ್ರಮುಖವಾಗಿದ್ದು, ನಾಗರಿಕತೆ ಹಾಳಾದರೆ ನಾವು ನಾಶವಾದಂತೆ ಎಂದು ಡೆಂಟಲ್ ಸರ್ಜನ್ ಹಾಗೂ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಅಧ್ಯಕ್ಷ ಡಾ.ಅನಿಲ್ ಥೋಮಸ್ ಅಭಿಪ್ರಾಯಪಟ್ಟರು.
ನೆಕ್ಟರ್ ಪ್ರೆಸ್ ಸಂಸ್ಥೆಯ ಅಂಗಸಂಸ್ಥೆ ವೀರವ್ರತಂ ಫೌಂಡೇಷನ್ ಮೈಸೂರು ವತಿಯಿಂದ ಗೋಣಿಕೊಪ್ಪಲು ಪರಿಮಳಮಂಗಳ ವಿಹಾರ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸ್ವಾಮಿ ವಿಗ್ಯಾನನಂದ ಅವರ ದಿ ಹಿಂದೂ ಮ್ಯಾನಿಫೆಸ್ಟೋ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಸಮಾಜದಲ್ಲಿ ಹೇಗೆ ಸಮಾನತೆಯಿಂದ ಬದುಕಬೇಕೆಂಬುದನ್ನು ನಮ್ಮ ಪೂರ್ವಜರು ನಮಗೆ ತಿಳಿಸಿಕೊಟ್ಟಿದ್ದಾರೆ. ಆದರೆ ಇತ್ತೀಚಿಗೆ ಮೇಲು, ಕೀಳೆಂಬ ಭಾವನೆ ಆರಂಭವಾಗಿ ಸಮಾಜದಲ್ಲಿ ಗೊಂದಲ ಹಾಗೂ ತಾರತಮ್ಯ ಉಂಟಾಗಿ ಐಕ್ಯತೆ ಕಾಪಾಡಲು ಸಾಧ್ಯವಾಗುತ್ತಿಲ್ಲ. ಮತ್ತೊಂದೆಡೆ ಸಮಾಜದಲ್ಲಿ ಮತಾಂತರವೆಂಬ ಕೆಟ್ಟ ಚಟವು ಆರಂಭವಾಗಿದ್ದು, ಇದನ್ನು ಸರ್ವರೂ ವಿರೋಧಿಸಬೇಕು. ಅದರೊಂದಿಗೆ ಸಮಾಜ ಹಾಗೂ ಸಮುದಾಯಗಳಲ್ಲಿರುವ ನ್ಯೂನತೆಗಳನ್ನು ನಾವೇ ಸರಿಪಡಿಸುವುದರೊಂದಿಗೆ ನಮ್ಮ ನಾಗರಿಕತೆಯನ್ನು ಉಳಿಸಿ ಬೆಳೆಸುವ ಕಡೆ ಗಮನಹರಿಸಬೇಕು. ಹಿಂದುಗಳು ಆರಂಭದಿಂದಲೂ ಜಾತ್ಯತೀತರಾಗಿದ್ದಾರೆ ಎಂಬುದಕ್ಕೆ ಭಾರತಕ್ಕೆ ಹೊರಗಿನಿಂದ ಬಂದ ಕ್ರೈಸ್ತರು, ಮುಸಲ್ಮಾನರಿಗೆ ಪ್ರಾರ್ಥನಾ ಕೇಂದ್ರಗಳನ್ನು ನಿರ್ಮಿಸಲು ಸ್ಥಳ ಕೊಟ್ಟಿರುವುದೇ ಇದಕ್ಕೆ ನಿದರ್ಶನ ಎಂದರು.
5ಡಿ ವರ್ಲ್ಡ್ ವೈಡ್ ಇಂಡಿಯಾ ನಿರ್ದೇಶಕ ಡಾ.ಅನಿಲ್ ಇಯಾಸೋ ಮಾತನಾಡಿ, ಹಿಂದು ಕೇವಲ ಧರ್ಮವಲ್ಲ. ಇದೊಂದು ಜೀವನ ಶೈಲಿ. ಭಾರತದ ಇತಿಹಾಸವನ್ನು ನೋಡಿದಾಗ ಶಿಕ್ಷಣಕ್ಕೆ ನಳಂದಾ, ತಕ್ಷಶಿಲದಂತಹ ವಿಶ್ವವಿದ್ಯಾಲಯಗಳು. ವೈದ್ಯಕೀಯ ಕ್ಷೇತ್ರದಲ್ಲಿ ಶುಶ್ರುತ, ಚರಕ, ತಂತ್ರಜ್ಞಾನ ಕ್ಷೇತ್ರವನ್ನು ತೆಗೆದುಕೊಂಡಾಗ ವಾಗ್ಭಟ ಹಾಗೂ ಆರ್ಯಭಟರಂತಹ ಮೇಧಾವಿಗಳನ್ನು ಒಳಗೊಂಡಂತೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಎಲ್ಲ ಕ್ಷೇತ್ರಗಳಲ್ಲೂ ಶ್ರೀಮಂತಿಕೆಯನ್ನು ಹೊಂದಿದ್ದ ದೇಶ ನಮ್ಮದಾಗಿತ್ತು. ಆದರೆ ನಮ್ಮ ಪೂರ್ವಜರು ಜಾತಿ, ಮತದ ಹಿನ್ನೆಲೆ ಮಾಡಿದ ಭೇದಭಾವದ ತಪ್ಪಿನಿಂದಾಗಿ ನಮ್ಮ ದೇಶವು ಬಡವಾಯಿತು. ಅರಬ್ಬರು, ಮೊಘಲರು, ಪೋರ್ಚುಗೀಸರು, ಡಚ್ಚರು, ಫ್ರೆಂಚರು, ಇಂಗ್ಲಿಷರು ಸುಮಾರು 500 ರಿಂದ 600 ವರ್ಷಗಳ ಕಾಲ ನಮ್ಮ ಸಂಸ್ಕೃತಿ, ದೇವಾಲಯ, ಸಂಪತ್ತು ಎಲ್ಲವನ್ನೂ ನಾಶ ಮಾಡಿ ಲೂಟಿ ಮಾಡಿದರು. ಇದಕ್ಕೆ ಕಾರಣವಾದದ್ದು ನಮ್ಮಲ್ಲಿ ಐಕ್ಯತೆ ಇಲ್ಲದಿರುವುದು. ಆದ್ದರಿಂದ ಮುಂದಾದರೂ ಎಚ್ಚೆತ್ತುಕೊಂಡು ನಾವೆಲ್ಲರೂ ಒಗ್ಗೂಡಿ ಭೇದಭಾವ ಬಿಟ್ಟು ದೇಶದ ರಕ್ಷಣೆಯನ್ನು ಮಾಡುವ ಕಡೆ ಗಮನ ಹರಿಸಿ, ವಿಕಸಿತ ಭಾರತದ ನಿರ್ಮಾಣಕ್ಕೆ ಸರ್ವರೂ ಕೊಡುಗೆ ನೀಡುವ ಅಗತ್ಯತೆ ಇದೆ. ಪ್ರಸ್ತುತ ಈ ಪುಸ್ತಕವು ದೇಶದ ಅಭಿವೃದ್ಧಿ ದೇಶದ ದಾರಿ ದೀಪದಂತೆ ತೋರುತ್ತದೆ ಎಂದರು.
ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಪೂರ್ವಜರು ನಾವು ಯಾವ ಮಾರ್ಗದಲ್ಲಿ ಸಾಗಬೇಕೆಂಬ ಸಂದೇಶವನ್ನು ನೀಡಿದ್ದಾರೆ. ಆದರೆ ನಾವು ಜಾತಿ, ಮತ, ಧರ್ಮಗಳ ಮೇಲಿನ ಅಪನಂಬಿಕೆಯಿಂದ ಸ್ವಾರ್ಥವನ್ನು ಯೋಚಿಸುತ್ತ ಭವಿಷ್ಯದ ಕುರಿತು ಯೋಚಿಸದೇ ಹಾಳು ಮಾಡುತ್ತಿದ್ದೇವೆ. ಇನ್ನಾದರೂ ಜಾಗೃತರಾಗಿ ಮುಂದಿನ ಬದುಕು ಕಠಿಣವಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ. ನಮ್ಮ ಸಂಸ್ಕೃತಿ, ಆಚಾರ, ವಿಚಾರ ಎಲ್ಲವನ್ನೂ ಇದೀಗ ವಿದೇಶಿಗರು ಒಪ್ಪಿ ಸ್ವೀಕರಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.
ದಿ ಹಿಂದೂ ಮ್ಯಾನಿಫೆಸ್ಟೋ ಪುಸ್ತಕದ ಲೇಖಕ ಸ್ವಾಮಿ ವಿಗ್ಯಾನನಂದ ಮಾತನಾಡಿ, 27 ವರ್ಷ ಜಗತ್ತಿನ ವಿವಿಧಡೆ ಪ್ರವಾಸ ಮಾಡಿದ್ದು, ಹಿಂದುಗಳನ್ನು ಕೇವಲ ಹಬ್ಬ, ಹರಿದಿನ ಹಾಗೂ ಆಹಾರ ಕ್ರಮದ ಮೂಲಕ ಜಗತ್ತಿನಲ್ಲಿ ಗುರುತಿಸಲಾಗುತ್ತಿತ್ತು. ಆದರೆ ಇತ್ತೀಚಿಗೆ ಯೋಗದ ಮೂಲಕ ಗುರುತಿಸುತ್ತಿದ್ದಾರೆ. ನಿರಂತರವಾಗಿ 15 ವರ್ಷಗಳ ಪ್ರಯತ್ನದಿಂದ ಈ ಪುಸ್ತಕವನ್ನು ಪೂರ್ಣಗೊಳಿಸಿ, ದೇಶ ಹಾಗೂ ಆರ್‌ಎಸ್‌ಎಸ್‌ಗೆ ಕಿರು ಕಾಣಿಕೆಯ ರೂಪದಲ್ಲಿ ಅರ್ಪಿಸುವ ಉದ್ದೇಶಿಸದಿಂದ ಬಿಡುಗಡೆಗೊಳಿಸಲಾಗಿದೆ ಎಂದರು.
ಮೇಜರ್ ಬಿದ್ದಂಡ ನಂದ ನಂಜಪ್ಪ ಪುಸ್ತಕವನ್ನು ವಿಮರ್ಶಿಸಿ ಪರಿಚಯಿಸಿದರು. ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಯೋಗೀಶಾನಂದ ಸ್ವಾಮೀಜಿ, ಪ್ರಜಾಪತಿ ಈಶ್ವರಿ ಬ್ರಹ್ಮಕುಮಾರಿ ಆಶ್ರಮದ ರಾಜ ಯೋಗಿನಿ ಬ್ರಹ್ಮಕುಮಾರಿ ಧನಲಕ್ಷ್ಮೀ, ಆರ್ಟ್ ಆಫ್ ಲಿವಿಂಗ್ ಪ್ರಮುಖರಾದ ರಾಜಪ್ಪ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಕಾಂತಿ ಸತೀಶ್, ಛಾಯಾ ನಂಜಪ್ಪ, ಕೊಲ್ಲೀರ ಧರ್ಮಜ, ಕೊಡಗು ಜಿಲ್ಲಾ ಆರೆಸ್ಸೆಸ್ ಸರ ಸಂಘ ಚಾಲಕರ ಚಕ್ಕೆರ ಮನು ಕಾವೇರಪ್ಪ ಇದ್ದರು.