ಜಿಲ್ಲೆ

ಓದಿನಿಂದ ಆತ್ಮವಿಶ್ವಾಸ ವೃದ್ಧಿ, ಎ.ಎಸ್.ಎನ್. ಹೆಬ್ಬಾರ್ ಹೇಳಿಕೆ

ಕೋಟ: ಪುಸ್ತಕ ಬರೆಯುವುದರಿಂದ ಜ್ಞಾನಶಕ್ತಿ ಬೆಳೆಯುತ್ತದೆ. ಪುಸ್ತಕ ಓದುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಜ್ಞಾನಾರ್ಜನೆಗಾಗಿ ಸದಾ ಅಧ್ಯಯನಶೀಲರಾಗಬೇಕು ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎ.ಎಸ್.ಎನ್. ಹೆಬ್ಬಾರ್ ಹೇಳಿದರು. ಕೋಟ ಕಾರಂತ ಥೀಂ ಪಾರ್ಕ್‌ನಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಮುಸ್ತಾಕ್ ಹೆನ್ನಾಬೈಲ್ ಅವರ ಪ್ರಥಮ ಕೃತಿ ಪರಿಭ್ರಮಣ, ನಾರಾಯಣ ಶೇವಿರೆ ಅವರ ದೇಶೀ ದಿಶೆ, ಉಪಾಸನೆ, ನರಹರಿ ಎ.ಎಂ. ಅವರ ಪ್ರಥಮ ಕೃತಿ ಶಿಕ್ಷಣ ಮನ್ವಂತರ ರಾಷ್ಟ್ರೀಯ ಶಿಕ್ಷಣ ನೀತಿ ಪುಸ್ತಕಗಳನ್ನು ಅನಾವರಣಗೊಳಿಸಲಾಯಿತು.

ಪುಸ್ತಕದ ಕುರಿತು ಎ.ಎಸ್.ಎನ್ ಹೆಬ್ಬಾರ್, ಇತಿಹಾಸ ಉಪನ್ಯಾಸಕ ಪ್ರಸಾದ್ ನಾರ್ಣಕಜೆ, ಶಿಕ್ಷಣ ಚಿಂತಕಿ ಕ್ಯಾಥರೀನ್ ರೋಡ್ರಿಗಸ್, ಸಿದ್ದಾಪುರ ಇಂದಿರಾ ಗಾಂಧಿ ವಸತಿ ಶಾಲೆಯ ಪ್ರಾಂಶುಪಾಲ ಪ್ರವೀಣ್ ಪೂಜಾರಿ ಮಾತನಾಡಿದರು.

ಕೃತಿಗಾರರಾದ ಮುಷ್ತಾಕ್ ಹೆನ್ನಾಬೈಲ್, ನಾರಾಯಣ ಶೇವಿರೆ, ಪ್ರೊ.ನರಹರಿ ಎ.ಎಂ ಅವರನ್ನು ಸನ್ಮಾನಿಸಲಾಯಿತು. ಚಿಂತಕ ಡಾ.ಜಗದೀಶ ಶೆಟ್ಟಿ ಶುಭ ಹಾರೈಸಿದರು. ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ ಉಪಸ್ಥಿತರಿದ್ದರು.