ಜಿಲ್ಲೆ

ಮಸ್ತಕ ತುಂಬುವ ಸಂಸ್ಕೃತಿಯ ಪುಸ್ತಕ ಬರಲಿ...

ವಿದ್ವಾನ್​ ಉಮಾಕಾಂತ ಭಟ್ಟ ಕೆರೆಕೈ ಅನಿಸಿಕೆ

ಜರ್ಮನಿಯ ನೆಲದಲ್ಲಿ ಕೃತಿ ಬಿಡುಗಡೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಭಾರತೀಯ ಸಂಸ್ಕೃತಿಯೆಂದರೆ ಅದು ವಿಶ್ವದ ಸಂಸ್ಕೃತಿ. ವಿಶ್ವ ಮೈತ್ರಿಯ ಸಂಸ್ಕೃತಿ. ವಿಶ್ವದ ಎಲ್ಲ ಜೀವಿಗಳನ್ನು ಉಳಿಸಿ, ಬಳಸಿ, ಬಾಳಿಸಿ, ಬೆಳಗಿಸುವುದು ನಮ್ಮ ಸಂಸ್ಕೃತಿಯಾಗಿದೆ. ಯಾತ್ರೆಯ ಕಥನದಿಂದ ಹೆಚ್ಚಿನ ಜ್ಞಾನ ಲಭಿಸುತ್ತದೆ. ಹೀಗಾಗಿ ಮಸ್ತಕ ತುಂಬುವ ಯಾತ್ರೆ ಸಂಸ್ಕೃತಿಯ ಪುಸ್ತಕಗಳ ಅಗತ್ಯತೆಯೂ ಇದೆ ಎಂದು ವಿದ್ವಾನ್​ ಉಮಾಕಾಂತ ಭಟ್ಟ ಕೆರೆಕೈ ಅಭಿಪ್ರಾಯಪಟ್ಟರು.

ಉಡುಪಿಯ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ಹವ್ಯಕಸಭಾ ಉಡುಪಿ (ರಿ.) ವತಿಯಿಂದ ಮಾ.8ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಸವಿತಾ ಕೆ. ಭಟ್ಟ ಅವರ ಜರ್ಮನಿಯ ನೆಲದಲ್ಲಿ ಪ್ರವಾಸ ಕಥನದ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ವಿನಿಯೋಗ ಅಗತ್ಯ

ಉಪಯೋಗಕ್ಕಿಂತ ವಿನಿಯೋಗದ ಕಡೆಗೆ ಗಮನ ನೀಡಬೇಕಿದೆ. ಬಳಸು ಮತ್ತು ಬಿಸಾಡು (ಯೂಸ್​ ಆ್ಯಂಡ್​ ಥ್ರೋ) ವಿಕೃತಿ ನಮ್ಮ ನೆಲದ್ದಲ್ಲ. ಉಪಯೋಗಿಸು, ಪುನರ್​ ಉಪಯೋಗಿಸು ಎಂಬುದು ನಮ್ಮತನ. ಸವಿತಾ ಭಟ್ಟ ಅವರ ಪ್ರವಾಸ ಕಥನ ನಮ್ಮತನಕ್ಕೆ ಪೂರಕವಾಗಿದೆ ಎಂದರು.

ಅನುಭವ ವಿಸ್ತರಣೆ

ಅಧ್ಯಕ್ಷತೆ ವಹಿಸಿದ್ದ ಡಾ.ಪಾದೇಕಲ್ಲು ವಿಷ್ಣು ಭಟ್ಟ ಮಾತನಾಡಿ, ಇಂತಹ ಪ್ರವಾಸ ಕಥನಗಳು ನಮ್ಮ ಅನುಭವದ ಪರಿಧಿಯನ್ನು ವಿಸ್ತರಿಸುತ್ತದೆ ಎಂದರು.

ಮಹೇಂದ್ರ ಎನ್​. ಶರ್ಮಾ ಮಾತನಾಡಿ, ಸವಿತಾ ಭಟ್ಟ ಅವರಿಂದ ಇನ್ನಷ್ಟು ಕೃತಿಗಳು ಮೂಡಿ ಬರಲಿ ಎಂದರು.

ಹಿರಿಯ ಸಾಹಿತಿ ಶಿರಸಿಯ ಗಣಪತಿ ಭಟ್ಟ ವರ್ಗಾಸರ ಕೃತಿ ಪರಿಚಯಿಸಿದರು.

ಸವಿತಾ ಭಟ್ಟ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಕೆ.ಸದಾಶಿವ್​ ರಾವ್​ ಕಾರ್ಯಕ್ರಮ ನಿರೂಪಿಸಿದರು. ಎಸ್​.ಜಿ. ಭಾಗವತ್​ ವಂದಿಸಿದರು.