ಜಿಲ್ಲೆ

ಲೇಖಕರ ಪರಿಚಯ ಉತ್ತಮ ಕೆಲಸ: ಹಿರಿಯ ಸಾಹಿತಿ ಕ್ಯಾತನಹಳ್ಳಿ ರಾಮಣ್ಣ ಬಣ್ಣನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಮಂಡ್ಯ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವುದರ ಜತೆಗೆ ಹೆಚ್ಚಿನ ಸಾಹಿತಿಗಳನ್ನು ಒಳಗೊಂಡ ವಿಶಿಷ್ಟ ಜಿಲ್ಲೆಯಾಗಿದೆ. ಈ ನಿಟ್ಟಿನಲ್ಲಿ ಲೇಖಕರನ್ನು ಪರಿಚಯಿಸಿರುವ ಪುಸ್ತಕವನ್ನು ಹೊರತಂದಿರುವುದು ಉತ್ತಮವಾದ ಕೆಲಸ ಎಂದು ಹಿರಿಯ ಸಾಹಿತಿ ಕ್ಯಾತನಹಳ್ಳಿ ರಾಮಣ್ಣ ಹೇಳಿದರು.

ನಗರದ ಕಾವೇರಿವನದಲ್ಲಿರುವ ಮಹಾತ್ಮಾ ಗಾಂಧೀಜಿ ಪ್ರತಿಮೆ ಬಳಿ ‘ಜಿಲ್ಲಾ ಜಾಗೃತ ಅಂಕಣಕಾರರ ವೇದಿಕೆ’ ವತಿಯಿಂದ ವೇದಿಕೆ ಅಧ್ಯಕ್ಷ ಪ್ರೊ.ಸಿ.ಸಿದ್ದರಾಜು ಆಲಕೆರೆ ಅವರು ರಚಿಸಿರುವ ‘ಸಕ್ಕರೆ ಸೀಮೆಯ ಲೇಖಕರ ಪರಿಚಯ’ ಭಾಗ-1, ಭಾಗ-2ನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಹಿರಿಯರು ಕಿರಿಯರೆನ್ನದೆ ಎಲ್ಲ ಲೇಖಕರ ವಿವರಗಳನ್ನು ಸಂಗ್ರಹಿಸಿರುವುದು ಸಾಹಿತ್ಯಾಸಕ್ತ ಓದುಗರಿಗೆ ಬಹಳ ಉಪಯುಕ್ತವಾದುದು. ಪುಸ್ತಕ ಸಂಸ್ಕೃತಿ ಉಳಿಸಿ ಬೆಳೆಸುವುದರಲ್ಲಿಯೂ ಇಂತಹ ಪುಸ್ತಕ ಉಪಯುಕ್ತವಾದುದು ಎಂದರು.

ನಿವೃತ್ತ ಉಪನ್ಯಾಸಕ ಪ್ರೊ.ಜಿ.ಟಿ.ವೀರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆದ ಸಂದರ್ಭದಲ್ಲಿ ಹೊರತರಲಾದ ಪುಣ್ಯಕೋಟಿ ಮತ್ತು ಸುವರ್ಣ ಮಂಡ್ಯ ಕೃತಿಗಳಲ್ಲೂ ಇಂತಹ ಪ್ರಯತ್ನ ನಡೆದಿತ್ತು. ಆದರೆ ಸಮಗ್ರವಾಗಿ ಎಲ್ಲರನ್ನೂ ಹಿಡಿದಿಡಲು ಸಾಧ್ಯವಾಗಿರಲಿಲ್ಲ. ಪ್ರೊ.ಸಿದ್ದರಾಜು ಆಲಕೆರೆ ಅವರು ಸಾಕಷ್ಟು ಲೇಖಕರನ್ನು ಈ ಕೃತಿಯ ಎರಡೂ ಭಾಗಗಳಲ್ಲಿ ಪರಿಚಯಿಸಿದ್ದಾರೆಂದು ಸಂತಸ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಬಿ.ಎಂ.ಶ್ರೀಕಂಠಯ್ಯ, ಪು.ತಿ.ನ, ಸು.ಜ.ನ, ಕೆ.ಎಸ್.ನರಸಿಂಹಸ್ವಾಮಿ, ಸೀತಾಸುತ, ಬೊಮ್ಮರಸೇಗೌಡ ಹೀಗೆ ಸಾಕಷ್ಟು ಸಾಹಿತಿಗಳು ಮಂಡ್ಯದವರು ಎಂಬುದು ಹೆಮ್ಮೆಯ ಸಂಗತಿ. ಆದರೆ, ಅವರೆಲ್ಲರ ಪರಿಚಯ ಬಹುತೇಕರಿಗಿಲ್ಲ. ಹಾಗಾಗಿ ಲೇಖಕರ ಪರಿಚಯಿಸುವ ಪುಸ್ತಕ ಮುಂದಿನ ತಲೆಮಾರಿನವರಿಗೆ ಬಹಳ ಉಪಯುಕ್ತವಾದವು ಎಂದು ಹೇಳಿದರು.

ಪ್ರೊ.ಸಿದ್ದರಾಜು ಆಲಕೆರೆ ಮಾತನಾಡಿ, ಈ ಪುಸ್ತಕದಲ್ಲಿ ಲೇಖಕರ ಭಾವಚಿತ್ರದೊಂದಿಗೆ ಅವರನ್ನು ಸರಳವಾಗಿ ಪರಿಚಯಿಸುವಂ ಪ್ರಯತ್ನ ಮಾಡಿದ್ದೇನೆ. ಆದರೆ ಎಲ್ಲಿಯೂ ಯಾರನ್ನೂ ವೈಭವೀಕರಿಸಿ, ಸತ್ಯಕ್ಕೆ ದೂರವಾದ ಸಂಗತಿಯನ್ನು ಇಲ್ಲಿ ದಾಖಲಿಸಿಲ್ಲ ಎಂದು ತಿಳಿಸಿದರು.

ಪಿಇಟಿ ನಿರ್ದೇಶಕ ಡಾ.ರಾಮಲಿಂಗಯ್ಯ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ, ಶಿಕ್ಷಕ ಶಿವ ಚಿದಂಬರ್, ಸಾಹಿತಿ ಲಿಂಗಣ್ಣ ಬಂಧುಕಾರ್, ರೈತಸಂಘದ ಕೆ.ಬೋರಯ್ಯ, ಸುನಂದಾ ಜಯರಾಂ, ಇಂಡುವಾಳು ಚಂದ್ರಶೇಖರ್, ಎಲ್.ಅಪ್ಪಾಜಯ್ಯ, ಧನಂಜಯ ದರಸಗುಪ್ಪೆ ಇತರರಿದ್ದರು.