ಮಂಡ್ಯ: ನಿತ್ಯಸಚಿವ ಕೆ.ವಿ.ಶಂಕರಗೌಡರ ವ್ಯಕ್ತಿತ್ವ, ನಾಯಕತ್ವ, ದೂರದರ್ಶಿತ್ವ ಇನ್ನೊಬ್ಬರಿಗೆ ಮಾದರಿ. ಇದನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಮಾಡಬೇಕು. ಕೆವಿಎಸ್ ಜಿಲ್ಲೆಯ ರಾಜಕೀಯ ಸಂತ, ಮಾನವತಾವಾದಿಯಾಗಿ ಉಳಿದಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಬಣ್ಣಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೆ.ವಿ.ಶಂಕರಗೌಡ ಅಧ್ಯಯನ ಪೀಠ, ಕರ್ನಾಟಕ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆ.ವಿ.ಶಂಕರಗೌಡ 109 ಒಂದು ನೆನಪು’ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ‘ಮತ್ತೆ ಮತ್ತೆ ಶಂಕರಗೌಡ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಕೆವಿಎಸ್ ಜಿಲ್ಲೆ ಮತ್ತು ನಾಡಿಗೆ ನೀಡಿರುವ ಕೊಡುಗೆ ಅಪಾರ. ಮಹಾತ್ಮ ಗಾಂಧೀಜಿ ಒಡನಾಡಿಯಾಗಿ ಅವರ ಎಲ್ಲ ಆಲೋಚನೆಗಳನ್ನು ಅತ್ಯಂತ ಬದ್ಧತೆಯಿಂದ ಅನುಸರಿಸುತ್ತಿದ್ದರು. ಪ್ಯಾರೇಲಾಲ್ ಬರೆದಿರುವ ಗಾಂಧಿ ಅವರ 1700 ಪುಟಗಳ ಕೃತಿಯನ್ನು ಎರಡು ಸಂಪುಟಗಳಲ್ಲಿ ’ಗಾಂಧೀಜಿಯ ಅಂತಿಮ ಹಂತ’ ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದ ಮಾಡಿಕೊಟ್ಟ ಕೀರ್ತಿ ಕೆವಿಎಸ್‌ಗೆ ಸಲ್ಲುತ್ತದೆ. ಈ ಕೃತಿ ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ಕಾಣಿಕೆಯಾಗಿದೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ ನಾಯಕತ್ವ ಗುಣ ಬೆಳೆಸಿದ ಕೀರ್ತಿ ಶಂಕರಗೌಡರಿಗೆ ಸಲ್ಲುತ್ತದೆ. ಕೆಲ ರಾಜಕಾರಣಿಗಳು ತನ್ನೊಟ್ಟಿಗೆ, ತನ್ನ ಸುತ್ತ ಇರುವವರನ್ನು ಯಾವ ಕಾರಣಕ್ಕೂ ಬೆಳೆಯಲು ಬಿಡುವುದಿಲ್ಲ. ಮುಂದೆ ನನ್ನ ಪ್ರತಿಸ್ಪರ್ಧಿಯಾಗಿ ನಿಲ್ಲುತ್ತಾರೆ ಎನ್ನುವ ಆತಂಕ. ಆದರೆ ಶಂಕರಗೌಡರು ಆ ರೀತಿ ಯೋಚನೆಯನ್ನು ಎಂದೂ ಮಾಡಲಿಲ್ಲ. ಡಾ.ಎಚ್.ಡಿ.ಚೌಡಯ್ಯ, ಎಚ್.ಟಿ.ಕೃಷ್ಣಪ್ಪ, ಬಂಡಿಸಿದ್ದೇಗೌಡ, ಆತ್ಮಾನಂದ, ಸಿಂಗಾರಿಗೌಡ ಮುಂತಾದವರ ನಾಯಕತ್ವದ ಪರಂಪರೆ ಹುಟ್ಟುಹಾಕಿದರು ಎಂದು ಹೇಳಿದರು.
ಶಂಕರಗೌಡ ಅವರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ವ್ಯವಸಾಯ ಸೇವಾ ಸಹಕಾರ ಸಂಘ ಹಾಗೂ ಅದರ ಶಾಖೆಗಳನ್ನು ಜಿಲ್ಲಾದ್ಯಂತ ಸ್ಥಾಪಿಸಿ ಆರ್ಥಿಕ ಅಡಿಪಾಯ ಹಾಕಿದರು. ಪೌರಾಣಿಕ ನಾಟಕ ಪ್ರದರ್ಶನದ ಮೂಲಕ ಹಣ ಸಂಗ್ರಹಿಸಿ ದೇವಾಲಯ ಮತ್ತು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಹೊಸ ಪರಂಪರೆಗೆ ನಾಂದಿ ಹಾಡಿದರು. ಅವರ ಹೆಸರಿನಲ್ಲಿ ಕೆ.ವಿ.ಶಂಕರಗೌಡ ಅಧ್ಯಯನ ಪೀಠ ಉತ್ತಮ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ಶಾಲಾ ಕಾಲೇಜು ದಿನಗಳಲ್ಲಿ ಎಪಿಎಂಸಿ ಆವರಣದಲ್ಲಿ ಕೆ.ವಿ.ಶಂಕರಗೌಡರನ್ನು ನೋಡುತ್ತಾ ಬೆಳೆದೆ. ನಾನು ರಾಜಕೀಯ ರಂಗಕ್ಕೆ ಬರಲು ಮತ್ತು ಶಿಕ್ಷಣ ಸಂಸ್ಥೆ ಕಟ್ಟಲು ಕೆ.ವಿ.ಶಂಕರಗೌಡ ಸ್ಫೂರ್ತಿಯಾಗಿದ್ದಾರೆ ಎಂದರು.
ಬೆಂಗಳೂರು ಕೇಂದ್ರ ವಲಯ ಐಜಿ ಡಾ.ಬಿ.ಆರ್.ರವಿಕಾಂತೇಗೌಡ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ’ಮತ್ತೆ ಮತ್ತೆ ಶಂಕರಗೌಡ’ ಪುಸ್ತಕದ ಪ್ರಧಾನ ಸಂಪಾದಕ ಡಾ.ರಾಗೌ, ಸಂಪಾದಕರಾದ ಡಾ.ಎನ್.ವೈ.ಶ್ರೀನಿವಾಸಯ್ಯ, ಎಂ.ಯು.ಶ್ವೇತಾ, ಮೈಸೂರು ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ, ಕರ್ನಾಟಕ ಸಂಘದ ಪದಾಧಿಕಾರಿಗಳಾದ ಲೋಕೇಶ್ ಚಂದಗಾಲು, ಹನಕೆರೆ ನಾಗಪ್ಪ ಇದ್ದರು.