ಜಿಲ್ಲೆ

ರಾಮಣ್ಣನವರ ಕೃತಿ ವಿದ್ವಾಂಸರಿಗೆ ಮೈಲಿಗಲ್ಲು: ಜಾನಪದ ವಿವಿ ಕುಲಪತಿ ಡಾ.ಟಿ.ಎಂ.ಭಾಸ್ಕರ್ ಮೆಚ್ಚುಗೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಸಾಹಿತಿ ರಾಮಣ್ಣನವರ ’ಜನಪದ ಸಾಹಿತ್ಯ ಚರಿತ್ರೆ’ ವಿದ್ವಾಂಸರಿಗೆ ಮೈಲುಗಲ್ಲು ಎನ್ನುವ ರೀತಿಯಲ್ಲಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ಎಂ.ಭಾಸ್ಕರ್ ಅಭಿಪ್ರಾಯಪಟ್ಟರು.

ನಗರದ ಗಾಂಧಿಭವನದಲ್ಲಿ ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ ಹಾಗೂ ಕ್ಯಾತನಹಳ್ಳಿ ರಾಮಣ್ಣ ಅಭಿಮಾನಿಗಳ ಬಳಗದಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ‘ಜನಪದ ಸಾಹಿತ್ಯ ಚರಿತ್ರೆ’ ಕೃತಿ ಬಿಡುಗಡೆ ಮಾತನಾಡಿದ ಅವರು, ಜಾನಪದ ವಿವಿಯಿಂದ ಗ್ರಾಮಚರಿತ್ರೆ ಕೋಶಕ್ಕೆ ಸಂಬಂಧಪಟ್ಟಂತಹ 10 ಕೋಟಿ ರೂ ವೆಚ್ಚದ ಬೃಹತ್ ಯೋಜನೆಯಾಗಿ 17 ಜಿಲ್ಲೆಯ ಗ್ರಾಮಚರಿತ್ರೆ ಕೋಶಗಳು ಈಗಾಗಲೇ ಲೋಕಾರ್ಪಣೆಗೊಂಡಿವೆ. ಉಳಿದ ಜಿಲ್ಲೆಗಳಿಗೆ ಸಂಬಂಧಪಟ್ಟಂತ ಕೆಲಸ ಪ್ರಾರಂಭಗೊಂಡು ಮುಕ್ತಾಯದ ಹಂತದಲ್ಲಿವೆ. ಸರ್ಕಾರದಿಂದ 2.17 ಕೋಟಿ ರೂ ಬಿಡುಗಡೆ ಹಂತದಲ್ಲಿದೆ. ಬಳಿಕ ಒಂದು ತಿಂಗಳಲ್ಲಿ ಎಲ್ಲ ಜಿಲ್ಲೆಯ ಗ್ರಾಮ ಚರಿತ್ರೆ ಕೋಶಗಳು ಲೋಕಾರ್ಪಣೆಗೊಳ್ಳಲಿದೆ. ಮಂಡ್ಯದಲ್ಲಿ ಸ್ಥಗಿತವಾಗಿರುವ ಅಧ್ಯಯನ ಕೇಂದ್ರದಲ್ಲಿ ಮುಂದಿನ ದಿನಗಳಲ್ಲಿ ಸರ್ಟಿಫಿಕೇಟ್ ಮತ್ತು ಡಿಪ್ಲೊಮಾ ಕೋರ್ಸ್‌ಗಳನ್ನು ಪುನಾರಂಭ ಮಾಡಲಾಗುವುದು ಎಂದರು.

ಪ್ರಥಮ ಪ್ರತಿ ಸ್ವೀಕರಿಸಿ ಮಾತನಾಡಿದ ಕರ್ನಾಟಕ ಜಾನಪದ ವಿವಿ ವಿಶ್ರಾಂತ ಕುಲಪತಿ ಡಾ.ಅಂಬಳಿಕೆ ಹಿರಿಯಣ್ಣ, ಕನ್ನಡ ಜಾನಪದ ಸಾಹಿತ್ಯ ಚರಿತ್ರೆ ಸಂಪುಟ ರಚನಾ ಕಾರ್ಯ ನಿಜಕ್ಕೂ ಮಹತ್ವದ್ದಾಗಿದೆ. ಸಾಂಸ್ಥಿಕವಾಗಿ ಮಾಡುವ ಮಹತ್ವದ ಯೋಜನೆಯನ್ನು ಏಕವ್ಯಕ್ತಿಯಾಗಿ ಕೈಗೆತ್ತಿಕೊಂಡು ಅನೇಕ ಪರಿಮಿತಿಗಳ ನಡುವೆ ಬಹಳ ಪ್ರಯತ್ನಪಟ್ಟು ರಾಮಣ್ಣ ಸಿದ್ಧ ಮಾಡಿದ್ದಾರೆ. ಜಾನಪದ ಕ್ಷೇತ್ರದ ಪಡಿಪಾಟಲು ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಒಟ್ಟಾರೆ ಅವರ ದುಡಿಮೆ ಲೆಕ್ಕಕ್ಕೆ ತೆಗೆದುಕೊಂಡು ಕರ್ನಾಟಕ ಜಾನಪದ ವಿವಿ ಪ್ರಥಮವಾಗಿ ರಾಮಣ್ಣನವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿದೆ. ಇದರಿಂದ ವಿವಿಯ ಗೌರವ ಹೆಚ್ಚಾಗಿದೆ ಎಂದರು.

ಕೃತಿ ಬಗ್ಗೆ ಮಾತನಾಡಿದ ಕರ್ನಾಟಕ ಜಾನಪದ ವಿವಿ ಪ್ರಾಧ್ಯಾಪಕ ಡಾ.ಕೆ.ಪ್ರೇಮಕುಮಾರ್, ರಾಮಣ್ಣನವರು ಒಂದು ಸಂಸ್ಥೆ ಮಾಡುವ ಕಾರ್ಯವನ್ನು ವೈಯಕ್ತಿಕ ನೆಲೆಯಲ್ಲಿ ಮಾಡಿದ್ದಾರೆ ಎಂಬುದು ಹೆಗ್ಗಳಿಕೆ. ನಮ್ಮ ತಲೆಮಾರಿನವರು ಪುಸ್ತಕ ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ. ಇಂದಿನ ಯುವಜನಾಂಗಕ್ಕೆ ಪುಸ್ತಕದ ಬಗ್ಗೆ ಯಾವ ಪ್ರೀತಿ ಇಲ್ಲ. ಫೇಸ್ಬುಕ್, ವಾಟ್ಸಾಪ್ ಯೂನಿವರ್ಸಿಟಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಜಾನಪದ ತಜ್ಞ ಹಾ.ತಿ.ಕೃಷ್ಣೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೃತಿ ಕರ್ತೃ ಕ್ಯಾತನಹಳ್ಳಿ ರಾಮಣ್ಣ, ಕೀಲಾರ ಕೃಷ್ಣೇಗೌಡ ಉಪಸ್ಥಿತರಿದ್ದರು. ಇದೇ ವೇಳೆ ವಿದುಷಿ ಡಾ.ಪದ್ಮಿನಿ ಅಚ್ಚಿ ಹಾಗೂ ವಿದುಷಿ ಸಿರಿ ಮಹೇಶ್ ಮತ್ತು ಇನಿ ಮಹೇಶ್ ಭರತನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟರು.