ಮಂಡ್ಯ: ಪ್ರಸ್ತುತ ಇರುವ ರಾಜಕೀಯ ವ್ಯವಸ್ಥೆ ಬದಲಾಗಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘ ಮಂಡ್ಯ ಮತ್ತು ಎಚ್.ವಿ.ವೀರೇಗೌಡ ಕುಟುಂಬ ವರ್ಗದಿಂದ ಹಮ್ಮಿಕೊಂಡಿದ್ದ ಹಿರಿಯ ರಾಜಕಾರಣಿ ಮಳವಳ್ಳಿಯ ಎಚ್.ವಿ.ವೀರೇಗೌಡರ ಜೀವನಾಧಾರಿತ ’ಹಳ್ಳಿಗಾಡಿನ ರೂವಾರಿ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಎಚ್.ವಿ.ವೀರೇಗೌಡರು ಒಂದು ಬಾರಿ ವಿಧಾನಸಭಾ ಸದಸ್ಯರಾಗಿದ್ದರೂ ಅವರನ್ನು ರಾಜಕಾರಣಿ ಎನ್ನಲು ಸಾಧ್ಯವಿಲ್ಲ. ಕಾರಣ ಅವರು ಸಮಾಜ ಸುಧಾರಕರಾಗಿದ್ದರು. ಸಾಮಾಜಿಕವಾಗಿ ಹೋರಾಡಿದವರು. ಇಂತಹ ಪರಿಸ್ಥಿತಿಯಲ್ಲಿ ವೀರೇಗೌಡರಂತವರು ಮತ್ತೆ ಹುಟ್ಟಿ ಬರಬೇಕು. ಇಂತಹವರಿಂದ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಬಂದಿದೆ ಎಂದರು.
ವೀರೇಗೌಡರು ಅಂದು ತಮ್ಮ ಚುನಾವಣೆಗೆ 12 ಸಾವಿರ ರೂ ಖರ್ಚು ಮಾಡಿದ್ದರು. ಆದರೆ ಇಂದು 12 ಕೋಟಿ ಬೇಕು. ಇಂತಹ ವ್ಯವಸ್ಥೆಯಲ್ಲಿ ಜನರು ತಮ್ಮ ಮತವನ್ನು ಮಾರಿಕೊಳ್ಳಬಾರದು. ಯಾವುದಾದರೂ ಕೆಲಸ ಕೊಡಬೇಕಾದರೆ ಅದನ್ನು ಮಾರಿಕೊಳ್ಳಬೇಡಿ. ಲಂಚ ತೆಗೆದುಕೊಳ್ಳುವವನು ಸತ್ಯವಾಗಿರಲು ಸಾಧ್ಯವಾ?. ಅವನು ತೆಗೆದುಕೊಂಡಿರುವ ಹಣದ 100 ರಷ್ಟು ಮತ್ತೆ ಸಂಪಾದನೆ ಮಾಡುತ್ತಾನೆ ಎಂದು ಎಚ್ಚರಿಸಿದ ಅವರು, ವೀರೇಗೌಡ ಅವರು ಸಹಕಾರ ಸಂಘದ ವಿಚಾರದಲ್ಲಿ ಬಹಳ ಚೆನ್ನಾಗಿ ತಿಳಿದುಕೊಂಡಿದ್ದ ವ್ಯಕ್ತಿ. ಈಗ ಪ್ರಜಾಪ್ರಭುತ್ವದ ರಾಜಕೀಯ ವ್ಯವಸ್ಥೆಯಲ್ಲಿ ನಾವಿದ್ದೇವೆ. ಪ್ರಜೆಗಳೇ ರಾಜರು. ಆದರೆ ಪರಿಸ್ಥಿತಿ ಹೇಗಾಗಿದೆ ಎಂದರೆ ಮರಿತಿಬ್ಬೇಗೌಡರು ಅವರ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದರೂ ಸೋಲಬೇಕಾಯಿತು ಎಂದರು.
ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ಕೃತಿ ರಚಿಸುವ ಉದ್ದೇಶವೆಂದರೆ ನಮ್ಮನ್ನಗಲಿದ ನಾಯಕರು ಹಿರಿಯರ ಬಗ್ಗೆ ಗೌರವ ಸಲ್ಲಿಸುವುದರ ಜತೆಗೆ ಅದನ್ನು ಮುಂದಿನ ತಲೆಮಾರಿನವರು ಓದಲಿ ಎನ್ನುವುದಾಗಿದೆ. ಜತೆಗೆ ಅವರ ಸೇವೆಯನ್ನು ಅರಿತುಕೊಳ್ಳಲಿ, ಯುವ ಜನಾಂಗಕ್ಕೆ ಮಾರ್ಗದರ್ಶಕವಾಗಲಿ ಎನ್ನುವ ದೃಷ್ಟಿಯಿಂದ ಮಾಡುತ್ತೇವೆ. ದೇವಿಕಾ ಅವರು ವೀರೇಗೌಡರ ಸೇವೆಯ ಮಹತ್ವವನ್ನು ಹೆಕ್ಕಿ ತೆಗೆದು ಅದಕ್ಕೆ ಹೊಳಪು ನೀಡಿ ಪ್ರಕಾಶಮಾನವಾಗಿ ಮಾಡಿದ್ದಾರೆ. ಇದರ ಉದ್ದೇಶ ಮುಂದಿನ ತಲೆಮಾರಿನವರು ನಮ್ಮ ಹಿರಿಯರ ಕೊಡುಗೆ ಏನಿದೆ?. ಇವರು ಇಷ್ಟು ಮಾಡಿದ್ದಾರೆ ಮುಂದೆ ನಮ್ಮ ಕೊಡುಗೆ ಏನು ಎಂಬುದನ್ನು ಅರಿತುಕೊಳ್ಳುತ್ತಾರೆ ಎಂಬ ಉದ್ದೇಶವಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಯಾರು ಜನರಿಗಾಗಿ ಬದುಕುತ್ತಾರೋ ಅವರೇ ನಿಜವಾದ ಶ್ರೇಷ್ಟ ಸೇವಕರು ಎನ್ನುವ ಸ್ವಾಮಿ ವಿವೇಕಾನಂದರ ವಾಣಿಯಂತೆ 1957ರಲ್ಲಿ ಶಾಸಕರಾಗಿ ವೀರೇಗೌಡರು ಅಂದಿನ ಆರ್ಥಿಕ ಪರಿಸ್ಥಿತಿ, ನಾಡಿನ ಜನಜೀವನ ವ್ಯವಸ್ಥೆಗೆ ಹೊಂದಿಕೊಂಡು ತನ್ನ ಕುಟುಂಬವನ್ನೇ ಒಂದು ಕಡೆ ಇಟ್ಟು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದವರು. ಮಹಾತ್ಮ ಗಾಂಧೀಜಿ ಅವರ ತತ್ವಗಳನ್ನೇ ಬದುಕನ್ನಾಗಿ ಆಧರಿಸಿ ಸಹಕಾರಿ ಆಂದೋಲನವನ್ನು ಪ್ರಾರಂಭ ಮಾಡಿ ಅಂದು ಎಷ್ಟೇ ಕಷ್ಟಗಳು ಬಂದರೂ ಕೂಡ ಬದುಕಿನಲ್ಲಿ ಸಮಾಜಕ್ಕಾಗಿ ತಮ್ಮನ್ನೇ ತಾವು ಅರ್ಪಿಸಿಕೊಂಡ ದೊಡ್ಡ ವ್ಯಕ್ತಿತ್ವ ಎಚ್.ವಿ.ವೀರೇಗೌಡರದು ಎಂದು ಬಣ್ಣಿಸಿದರು.
ಇವತ್ತು ನಾವು ಶಾಸಕರಾಗಿ ಬಿಟ್ಟರೆ ನನ್ನ ಮಗ, ನಮ್ಮ ಸೊಸೆ ಶಾಸಕರಾಗಬೇಕು. ಅಲ್ಲಿವರೆಗೆ ಹೋರಾಟ ಮಾಡುತ್ತೇವೆ. ದೊಡ್ಡ ದೊಡ್ಡ ಧೀಮಂತ ರಾಜಕಾರಣಿಗಳು ನಮ್ಮ ಜಿಲ್ಲೆಯಲ್ಲಿ ಹುಟ್ಟಿ ಬೆಳೆದಿದ್ದಾರೆ. ಅಂದಿನ ದಿನಮಾನಗಳಲ್ಲಿ ತಮ್ಮ ಸ್ವಾರ್ಥತೆ ಮರೆತು ನಮ್ಮ ನಾಯಕರಾದಂತಹ ಈ ಜಿಲ್ಲೆಯ ಜಿ.ಮಾದೇಗೌಡರಿಗೆ ಶಾಸಕರಾಗುವಂತ ಅವಕಾಶ ಕಲ್ಪಿಸಿದ ವೀರೇಗೌಡರ ತ್ಯಾಗವನ್ನು ಸ್ಮರಿಸಿದರು.
ಕೊಮ್ಮೇರಹಳ್ಳಿ ವಿಶ್ವಮಾನವ ಕ್ಷೇತ್ರದ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಮಾರಂಭದ ಸಾನಿಧ್ಯ ವಹಿಸಿದ್ದರು. ಎಚ್.ವಿ.ವೀರೇಗೌಡ ಹಾಗೂ ಹಳ್ಳಿಗಾಡಿನ ರೂವಾರಿ ಕೃತಿ ಕುರಿತು ಲೋಕೇಶ್ ಚಂದಗಾಲು, ಕೃತಿ ಕರ್ತೃ ಡಾ.ಎನ್.ಎಸ್.ದೇವಿಕಾ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ವೀರೇಗೌಡರ ಹಿರಿಯ ಪುತ್ರ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಚ್.ವಿ.ಜಯರಾಮ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಅನಿತಾ, ಮಂಜುಳಾ ಉದಯಶಂಕರ್, ಡಾ.ಕೆಂಪಮ್ಮ ಹಾಗೂ ಎಚ್.ವಿ.ವೀರೇಗೌಡ ಕುಟುಂಬ ವರ್ಗದವರು ಹಾಜರಿದ್ದರು.