ಜಿಲ್ಲೆ

ಮಂಡ್ಯ ಜಾನಪದ ಕ್ಷೇತ್ರದ ತವರು: ಚಿಂತಕ ಡಾ.ಅಪ್ಪಗೆರೆ ತಿಮ್ಮರಾಜು ಬಣ್ಣನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಮಂಡ್ಯ ಜಿಲ್ಲೆ ಜಾನಪದ ಕ್ಷೇತ್ರದ ತವರು ಎಂದು ಜಾನಪದ ಚಿಂತಕ ಡಾ.ಅಪ್ಪಗೆರೆ ತಿಮ್ಮರಾಜು ಬಣ್ಣಿಸಿದರು.

ನಗರದ ಗಾಂಧಿಭವನದಲ್ಲಿ ಜನಕಲಾರಂಗ ಸಾಂಸ್ಕೃತಿಕ ವೇದಿಕೆಯಿಂದ ಆಯೋಜಿಸಿದ್ದ ಜಾನಪದ ಹಾಡುಗಾರ್ತಿ ಬೋರಮ್ಮ ಅವರ ನೆನಪಿನಲ್ಲಿ ಬೆಳಗಾಗಿ ನಾನೆದ್ದು ಪುಸ್ತಕ ಬಿಡುಗಡೆ ಮತ್ತು ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರ ಜಾನಪದ ಕಲೆಗಳ ಅಭಿವೃದ್ಧಿಗೆ ಅಕಾಡೆಮಿ ಸ್ಥಾಪನೆ ಮಾಡಬೇಕು. ಈ ಮೂಲಕ ಕಲೆಯನ್ನು ಉಳಿಸಿ ಬೆಳೆಸಬೇಕು. ನೋವು, ಹಸಿವು, ಅನಕ್ಷರಸ್ಥರಿಂದ ಹುಟ್ಟಿದ ಜಾನಪದ ಕ್ಷೇತ್ರ ನಶಿಸಿ ಹೋಗುವ ಮುನ್ನ ಜಾಗೃತಿ ವಹಿಸಬೇಕು. ಕಲಾವಿದರನ್ನು ಬಳಸಿಕೊಂಡು ಕ್ಷೇತ್ರವನ್ನು ಶ್ರೀಮಂತಗೊಳಿಸುವ ದೊಡ್ಡ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ರೈತಪರ ಹೋರಾಟಗಾರ್ತಿ ಸುನಂದಾ ಜಯರಾಂ ಮಾತನಾಡಿ, ಒಡೆದ ಮನಸ್ಸುಗಳನ್ನು ಕಟ್ಟುವ ಹಾಗೂ ಬೆಳೆಸುವಂತಹ ಶಕ್ತಿ ಜಾನಪದ ಕ್ಷೇತ್ರ ಹೊಂದಿದೆ. ಹೋರಾಟ, ಕ್ರಾಂತಿ, ಮಹಿಳಾ ಪರ ಹೋರಾಟ ಸೇರಿದಂತೆ ನೋಂದವರ ಧ್ವನಿಗಾಗಿ ಸಹಕರಿಸಿ ಹಾಡಿನ ಮೂಲಕ ಶಕ್ತಿಯನ್ನ ತುಂಬುವಂತಹ ಕ್ಷೇತ್ರವಾಗಿ ಹೊರಹೊಮ್ಮಿದೆ. ನೊಂದವರ ಹಾಗೂ ಅಸಹಾಯಕರ ಪರ ನಿಲ್ಲುವಂತಹ ಆರೋಗ್ಯಕರ ಕಿಚ್ಚನ್ನು ಹಚ್ಚುವುದರ ಹೋರಾಟದ ಕ್ಷೇತ್ರಕ್ಕೆ ಶಕ್ತಿಯನ್ನು ನೀಡುವಂತಹ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಿದರು.

ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ, ಜಾನಪದ ಪರಿಷತ್‌ನ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ, ಜನಕಲಾರಂಗ ಅಧ್ಯಕ್ಷ ಹುರಗಲವಾಡಿ ರಾಮಯ್ಯ ಮಾತನಾಡಿದರು. ನಿವೃತ್ತ ಪ್ರಾಂಶುಪಾಲ ಪ್ರೊ.ಬಿ.ಎಸ್.ಚಂದ್ರಶೇಖರನ್ ಸಭೆಯ ಅಧ್ಯಕ್ಷತೆ ವಹಿಸಿದರು. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್.ಸಂದೇಶ್, ಗ್ರಂಥಪಾಲಕ ಕೂಡಲಕುಪ್ಪೆ ಸೋಮಶೇಖರ್ ಇತರರಿದ್ದರು.

ಇದೇ ವೇಳೆ ಕಲಾವಿದರಾದ ಸಿ.ಎಂ.ನರಸಿಂಹಮೂರ್ತಿ, ವಳಗೆರಹಳ್ಳಿ ಲೋಕೇಶ್, ಸವಿತಾ, ಆಲದಹಳ್ಳಿ ಮಂಜುಳಾ, ಚಿಕ್ಕಪ್ಪಾಜಿ, ಬಸವಣ್ಣ, ಯೋಗೇಶ್, ಚಂದ್ರಶೇಖರ್, ಧನಂಜಯ ಸೇರಿದಂತೆ ಇತರರನ್ನು ಸನ್ಮಾನಿಸಲಾಯಿತು.