ಮೈಸೂರು: ಪುಸ್ತಕ ಅಲಂಕಾರಕ್ಕಲ್ಲ, ಜ್ಞಾನವನ್ನು ಹೆಚ್ಚಿಸುವ ಸಾಧನವಾಗಬೇಕು ಎಂದ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಡಾ.ಎಸ್.ಶಿವರಾಜಪ್ಪ ಅಭಿಪ್ರಾಯಪಟ್ಟರು.
ನಗರದ ನಟರಾಜ ಕಲ್ಯಾಣ ಮಂಟಪದಲ್ಲಿ ಸಮಾಜ ಸೇವಕ ಚಂದ್ರು ಸೇವಾ ಸಮಿತಿಯಿಂದ ಶನಿವಾರ ಆಯೋಜಿಸಿದ್ದ ಚಂದ್ರು ಅವರ ಪುಣ್ಯಸ್ಮರಣೆ ಹಾಗೂ ಸಾಹಿತಿ ನಗರ್ಲೆ ಶಿವಕುಮಾರ್ ಅವರು ರಚಿಸಿರುವ ಪ್ರತಿಬಿಂಬ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಇತ್ತೀಚೆಗೆ ಅಶ್ಲೀಲ ಸಾಹಿತ್ಯ ಬರುತ್ತಿದ್ದು, ನಮ್ಮ ಸಂಸ್ಕೃತಿ, ಪರಂಪರೆಯನ್ನು ವಿನಾಶದತ್ತ ಕೊಂಡೊಯ್ಯುತ್ತಿದೆ. ಉತ್ತಮ ಸಾಹಿತಿಗಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು.
ಪುಸ್ತಕ ನಾಡು, ನುಡಿ, ಸಂಸ್ಕೃತಿ ಉಳಿಸುವಂತಾಗಬೇಕು, ನಾಡನ್ನು ವಿನಾಶದತ್ತ ಕೊಂಡೊಯ್ಯಬಾರದು ಎಂದರು.
ಸಮಾಜ ಸೇವಕ ಚಂದ್ರು ಅವರು ಕೃಷಿಯ ಜತೆಗೆ ಸಮಾಜ ಸೇವೆಯನ್ನೂ ಮೈಗೂಡಿಸಿಕೊಂಡು, ಧಾರ್ಮಿಕ ಭಾವನೆ ಹೊಂದಿರುವುದರಿಂದ ಅವರು ಗತಿಸಿ ವರ್ಷವಾದರೂ ಜನ ಮಾನಸದಲ್ಲಿ ಉಳಿದಿದ್ದಾರೆ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಎಚ್.ವಿ.ಬಸವರಾಜು ಹಿನಕಲ್ ಮಾತನಾಡಿ, ಸಾಹಿತಿಗಳಿಗೆ ಪ್ರೋತ್ಸಾಹ ಅಗತ್ಯವಾಗಿದ್ದು, ವೀರಶೈವ ಲಿಂಗಾಯತ ಘಟಕ ಸಹಕಾರ ನೀಡಲು ಸಿದ್ಧವಿದೆ ಎಂದರು.
ಪ್ರತಿಬಿಂಬ ಕೃತಿಯ ಲೇಖಕ ನಗರ್ಲೆ ಶಿವಕುಮಾರ್ ಮಾತನಾಡಿ, ಇತಿಹಾಸವನ್ನು ತಿಳಿಸಲು ಪುಸ್ತಕಗಳ ಅಗತ್ಯವಿದೆ. ಪುಸ್ತಕಗಳಿಲ್ಲದೆ ಇತಿಹಾಸವನ್ನು ಅರಿಯಲಾಗದು. ಪುಸ್ತಕ ರಚನೆ ಹಾಗೂ ಓದುವ ಸಂಸ್ಕೃತಿ ಹೆಚ್ಚಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸೈಬರ್ ಅಪರಾಧ ಠಾಣೆಯ ಪೊಲೀಸ್ ನಿರೀಕ್ಷಕ ಎಸ್.ಪಿ.ಸುನೀಲ್, ಮೈಸೂರು ಕೆಎಸ್ ಆರ್‌ಪಿ 5ನೇ ಬೆಟಾಲಿಯನ್ ಪೊಲೀಸ್ ನಿರೀಕ್ಷಕ ಎನ್.ಎಂ.ಗಂಗಾಧರ ಅವರನ್ನು ಸನ್ಮಾನಿಸಲಾಯಿತು.
ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಮ್ಮುಖದಲ್ಲಿ ಜರುಗಿದ ಸಮಾರಂಭದಲ್ಲಿ ದೇವಾಲಪುರದ ಶ್ರೀಗುರುಮಲ್ಲೇಶ್ವರ ದಾಸೋಹ ಮಠದ ಶ್ರೀ ಜಡೇ ಸ್ವಾಮೀಜಿ, ನವಿಲೂರು ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಬನ್ನಳ್ಳಿಹುಂಡಿ ಮಠದ ಶ್ರೀ ಬಸವರಾಜ ಸ್ವಾಮೀಜಿ ಉಪಸ್ಥಿತರಿದ್ದರು.