ಬೆಟ್ಟದಪುರ: ಜನರಲ್ಲಿ ಓದುವ ಅಭ್ಯಾಸವನ್ನು ಬೆಳೆಸುವ ಮತ್ತು ಗ್ರಂಥಾಲಯಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುವ ಒಂದು ಆಚರಣೆಯೇ ಗ್ರಂಥಾಲಯ ಸಪ್ತಾಹದ ಉದ್ದೇಶವಾಗಿದೆ ಎಂದು ಬೆಟ್ಟದಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಶೇಖರ್ ಅಭಿಪ್ರಾಯಪಟ್ಟರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಗ್ರಾಮ ಪಂಚಾಯಿತಿಯ ಗ್ರಂಥಾಲಯದಲ್ಲಿ ಬುಧವಾರ ಆಯೋಜಿಸಿದ ರಾಷ್ಟ್ರೀಯ ಗ್ರಂಥಾಲಯ ಸಪ್ತಹ ಕಾರ್ಯಕ್ರಮದಲ್ಲಿ ಮಾತನಾಡಿ, ಓದುವ ಅಭ್ಯಾಸವನ್ನು ಯುವ ಜನರಲ್ಲಿ ಬೆಳೆಸುವುದು ಈ ಸಪ್ತಾಹದ ಪ್ರಮುಖ ಉದ್ದೇಶವಾಗಿದೆ, ವಿವಿಧ ವಿಷಯಗಳ ಕುರಿತಾದ ಪುಸ್ತಕಗಳ ಪ್ರದರ್ಶನಗಳು ಯುವಕರನ್ನು ಆಕರ್ಷಿತರನ್ನಾಗಿ ಮಾಡುವುದರಿಂದ ಅವರಿಗೆ ಹುಮ್ಮಸ್ಸು ಮತ್ತು ಓದುವ ಹವ್ಯಾಸವನ್ನು ಬೆಳೆಸಿದಂತಾಗುತ್ತದೆ ಎಂದು ತಿಳಿಸಿದರು.
ಪಿಡಿಒ ಮಂಜುನಾಥ್ ಮಾತನಾಡಿ ಮುಂದಿನ ದಿನಗಳಲ್ಲಿ ಮಕ್ಕಳಿಗಾಗಿ ಕಥೆ ಹೇಳುವ ಸ್ಪರ್ಧೆಗಳು, ವಿವಿಧ ವಯೋಮಾನದವರಿಗೆ ಪುಸ್ತಕ ಓದುವ ಸ್ಪರ್ಧೆಗಳು, ಸೇರಿದಂತೆ ಕವಿಗೋಷ್ಠಿಗಳು ಮತ್ತು ಸಾಹಿತ್ಯ ಸಂವಾದಗಳನ್ನು ಏರ್ಪಡಿಸುವುದರಿಂದ ಎಲ್ಲಾ ವರ್ಗದ ಜನತೆ ಗೆ ಓದುವ ಆಸಕ್ತಿಯನ್ನು ಬೆಳೆಸಲು ಸಹಾಯಕವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮಿ, ಸದಸ್ಯರಾದ ಗಿರಿಗೌಡ, ಶಂಕರ್, ಮೇಲ್ವಿಚಾರಕ ಎಚ್.ಎಂ ಮೈಲಾರಿ, ಸಿಬ್ಬಂದಿ ದೀಪು ಅಣ್ಣಯ್ಯ, ದೇವರಾಜು, ಮುರುಗೇಶ್ ಇತರರು ಇದ್ದರು.