ಜಿಲ್ಲೆ

ಸಂಘ-ಸಂಘಟನೆಗಳಿಂದ ಶಾಲೆ ಉಳಿವಿಗೆ ಪ್ರಯತ್ನ : ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಓಂಪ್ರಕಾಶ್ ಶೆಟ್ಟಿ ಹೇಳಿಕೆ

ಸೌಮ್ಯ ಆರ್

ಗುರುಪುರ: ಖಾಸಗಿ ಶಾಲೆಗಳ ಭರಾಟೆಯಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿದ್ದು, ಸಾಮಾಜಿಕ ಸಂಘಟನೆಗಳು ಹಾಗೂ ಶಿಕ್ಷಣ ಪ್ರೇಮಿ ಸಂಘಗಳು ಶಾಲೆಗಳ ಉಳಿಯುವಿಕೆಗೆ ಗುರುತರ ಪ್ರಯತ್ನ ಮಾಡುತ್ತಿವೆ. ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಸರ್ಕಾರಿ ಶಾಲಾ ಮಕ್ಕಳು ಸಾಮಾನ್ಯ ಜ್ಞಾನ(ವ್ಯಾವಹಾರಿಕ ಜ್ಞಾನ)ದಲ್ಲಿ ಮುಂದೆ ಇದ್ದಾರೆ ಎಂದು ಸಂಘದ ಅಧ್ಯಕ್ಷ ಓಂಪ್ರಕಾಶ್ ಶೆಟ್ಟಿ ಹೇಳಿದರು.

ಗುರುಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾರಿಕರಿಯದ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಶುಕ್ರವಾರ ಬರೆಯುವ ಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಸರ್ಕಾರ ತನ್ನ ಶಾಲಾ ಮಕ್ಕಳಿಗೆ ವಿವಿಧ ಯೋಜನೆ ಗೊತ್ತುಪಡಿಸಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಶಾಲಾ ಮಕ್ಕಳು ಅಗತ್ಯಕ್ಕಿಂತ ಹೆಚ್ಚು ಮೊಬೈಲ್ ಬಳಕೆ ಮಾಡಬಾರದು ಎಂದರು.

ಶಾಲಾ ಆಡಳಿತ ಮಂಡಳಿ ವತಿಯಿಂದ ಓಂಪ್ರಕಾಶ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಗು.ವ್ಯ.ಸೇ.ಸ. ಸಂಘದ ಉಪಾಧ್ಯಕ್ಷ ಜಿ.ಎಂ.ಉದಯ ಭಟ್, ನಿರ್ದೇಶಕರಾದ ದಿನೇಶ್ ಜೆ.ಕರ್ಕೇರ, ನಳಿನಿ ಶೆಟ್ಟಿ, ಲತಾ ಆರ್.ಶೆಟ್ಟಿ, ಗುರುಪುರ ಗ್ರಾಪಂ ಸದಸ್ಯೆ ಶಶಿಕಲಾ, ಆಶಾ ಕಾರ್ಯಕರ್ತೆ ಜಯಲಕ್ಷ್ಮೀ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಲತಾ, ಸಹ-ಶಿಕ್ಷಕಿ, ಪಾಲಕರು, ವಿದ್ಯಾರ್ಥಿಗಳು ಇದ್ದರು.

ಮುಖ್ಯ ಶಿಕ್ಷಕಿ ರಮಾದೇವಿ ನಿರೂಪಿಸಿದರು.