ಬೆಂಗಳೂರು: ಭಾರತೀಯ ಭಾಷಾ ಸಾಹಿತ್ಯದ ಮಹತ್ವವನ್ನು ಜಗತ್ತಿಗೆ ಸಾರುವುದು ಉದ್ದೇಶದೊಂದಿಗೆ ಬುಕ್ ಬ್ರಹ್ಮ ಸಂಸ್ಥೆಯು ಕೋರಮಂಗಲದ ಸೇಂಟ್ ಜಾನ್ಸ್ ಸಭಾಂಗಣದಲ್ಲಿ ಆ.9ರಿಂದ 11ರವರೆಗೆ ಬುಕ್ ಬ್ರಹ್ಮ ಸಾಹಿತ್ಯ ಉತ್ಸವ ಹಮ್ಮಿಕೊಂಡಿದೆ.
ಪರಸ್ಪರ ಕೊಡು ಕೊಳ್ಳುವಿಕೆಯ ಮೂಲಕ ಭಾಷೆ ಮತ್ತು ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸಲು ಹಾಗೂ ದಕ್ಷಿಣ ಭಾರತದ ಎಲ್ಲ ಭಾಷೆಗಳ ಪ್ರಕಾಶಕರನ್ನು ಒಂದೆಡೆ ಸೇರಿಸಲು ಈ ಉತ್ಸವ ವೇದಿಕೆಯಾಗಲಿದೆ. ಇದರಲ್ಲಿ ದಕ್ಷಿಣದ ಐದು ರಾಜ್ಯಗಳಿಂದ ಸುಮಾರು 450 ಸಾಹಿತಿಗಳು, 100ಕ್ಕೂ ಹೆಚ್ಚು ಪ್ರಕಾಶಕರು ಭಾಗವಾಗಲಿದ್ದಾರೆ.
ಮೂರು ದಿನಗಳ ಈ ಉತ್ಸವದಲ್ಲಿ ಕನ್ನಡ, ತಮಿಳು, ಮಲಯಾಳಂ, ತೆಲುಗು ಮತ್ತು ಇಂಗ್ಲಿಷ್ ಭಾಷೆಯ 60 ಪುಸ್ತಕ ಮಳಿಗೆಗಳು ಇರಲಿವೆ. ಸಮಾನಾಂತರವಾಗಿ ನಾಲ್ಕು ಸಭಾಂಗಣದಲ್ಲಿ ವಿವಿಧ ಗೋಷ್ಠಿಗಳಿಗೆ ವ್ಯವಸ್ಥೆ ಮಾಡಲಾಗಿದ್ದು, ಒಟ್ಟು ಸುಮಾರು 80 ಗೋಷ್ಠಿಗಳು ನಡೆಯಲಿವೆ ಎಂದು ಸಂಸ್ಥೆ ತಿಳಿಸಿದೆ.
ನೋಂದಾಯಿತರಿಗೆ ಉಚಿತ ಪಾಸ್: ಉತ್ಸವದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸಲು ಇಚ್ಛಿಸುವವರು www.bookbrahmalitfest.com ಗೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು. ನೋಂದಣಿ ಮಾಡಿಕೊಂಡ ಪ್ರತಿನಿಧಿಗಳಿಗೆ ಸಾಹಿತ್ಯ ಉತ್ಸವ ನಡೆಯುವ ದಿನಗಳಂದು ಕಾರ್ಯಕ್ರಮ ನಡೆಯುವ ಸಭಾಂಗಣದ ಆವರಣದಲ್ಲಿ ಪ್ರವೇಶದ ಉಚಿತ ಪಾಸ್ ನೀಡಲಾಗುವುದು. ಈ ಪಾಸ್ ಹೊಂದಿದವರಿಗೆ ಮಾತ್ರ ಸಾಹಿತ್ಯ ಉತ್ಸವದ ಗೋಷ್ಠಿಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉಚಿತವಾಗಿ ಭಾಗವಹಿಸಲು ಅವಕಾಶ ಇರಲಿದೆ.