ಜಿಲ್ಲೆ

ಸಾಹಿತ್ಯ ಓದುವ ಅಭಿರುಚಿ ಬೆಳೆಸಿಕೊಳ್ಳಿ: ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಕಿವಿಮಾತು

reportermys

ಮಂಡ್ಯ: ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಸಾಹಿತ್ಯ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಅಭಿಪ್ರಾಯಪಟ್ಟರು.

ನಗರದ ಕನ್ನಿಕಾಶಿಲ್ಪಾ ನವೋದಯ ಶಾಲೆಯಲ್ಲಿ ಪ್ರತಿಭೆ ವೇದಿಕೆ ಪ್ರಕಾಶನದಡಿ ಡಾ.ಎಚ್.ಆರ್.ಕನ್ನಿಕಾ ವಿರಚಿತ ಚಿನ್ನರ ಮೋದದ ಕಥೆಗಳು ಹಾಗೂ ಕನ್ನಡದ ಕಥೆಗಳು ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಕನ್ನಡ ಸಾಹಿತ್ಯದಲ್ಲಿ ಹಿರಿಯರಿಗಾಗಿ ಬರೆಯುವ ಸಾಹಿತಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆದರೆ, ಮಕ್ಕಳಲ್ಲಿ ಆಸಕ್ತಿ, ಆನಂದ, ಚೇತನವನ್ನು ಉಕ್ಕಿಸುವ ಸಾಹಿತ್ಯ ರಚಿಸುವವರು ಬೆರಳೆಣಿಕೆಯಷ್ಟಿದ್ದಾರೆ. ಈ ನಿಟ್ಟಿನಲ್ಲಿ ಮಂಡ್ಯದ ಕನ್ನಿಕ ಅವರ ಸಾಧನೆ ಶ್ಲಾಘನೀಯ ಎಂದು ಬಣ್ಣಿಸಿದರು.

ನವೋದಯ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದನ್ನೇ ಬದುಕಿನ ಗುರಿಯಾಗಿಸಿಕೊಂಡ ಕನ್ನಿಕಾ ಅವರು, ಅದರೊಟ್ಟಿಗೆ ಸಾಹಿತ್ಯ ಪ್ರಕ್ರಿಯೆಯಲ್ಲೂ ತಮ್ಮನ್ನು ಅವಿರತವಾಗಿ ತೊಡಗಿಸಿಕೊಂಡಿದ್ದಾರೆ. ಇದಕ್ಕೆ ಅವರು ಈತನಕ ಬರೆದಿರುವ ಹದಿನಾಲ್ಕು ಕೃತಿಗಳೇ ಸಾಕ್ಷಿ. ಮಕ್ಕಳಲ್ಲಿ ಓದುವ ಸದಾಭಿರುಚಿ ಬೆಳೆಸುವ ದೃಷ್ಟಿಯನ್ನಿಟ್ಟುಕೊಂಡು ಎರಡು ಪುಸ್ತಕ ರಚಿಸಿದ್ದಾರೆ. ಇದು ಮಕ್ಕಳನ್ನು ಓದಲು ಪ್ರೇರೇಪಿಸುತ್ತದೆ ಹಾಗೂ ಓದುವ ಆಸಕ್ತಿಯನ್ನು ಹೆಚ್ಚಿಸುತ್ತದೆ ಎಂದರು.

ಬಿಎಸ್‌ಎನ್‌ಎಲ್ ನಿವೃತ್ತ ಅಧಿಕಾರಿ ರಾಜರತ್ನಂ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ, ಡಾ.ಎಚ್.ಆರ್.ಕನ್ನಿಕಾ, ಎಚ್.ಬಿ.ರಾಮಕೃಷ್ಣ, ಸೌಮ್ಯ ಹಾಜರಿದ್ದರು.