ಮಂಡ್ಯ: ಧರ್ಮ ಮತ್ತು ರಾಜಕಾರಣದ ನಡುವೆ ಕಲುಷಿತಗೊಳ್ಳುತ್ತಿರುವ ಸಮಾಜವನ್ನು ತಿದ್ದುವ ಶಕ್ತಿ ಸಾಹಿತ್ಯಕ್ಕಿದೆ ಎಂದು ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಭೈರಮಂಗಲ ರಾಮೇಗೌಡ ಅಭಿಪ್ರಾಯಿಸಿದರು.
ನಗರದ ಗಾಂಧಿಭವನದಲ್ಲಿ ಭೂಮಿ ಬೆಳಗು ಸಾಂಸ್ಕೃತಿಕ ಸಂಘ ಮಂಗಲದಿಂದ ಆಯೋಜಿಸಿದ್ದ ಸಂತೆಕಸಲಗೆರೆ ಪ್ರಕಾಶ್ ರಚಿತ ‘ನಾಲಿಗೆ ಸವೆದ ಕುರುಹುಗಳಿಲ್ಲ’ ಕವನ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದರು. ಪಾಶ್ಚಿಮಾತ್ಯ ದೇಶಗಳಲ್ಲಿ ಪತ್ರಿಕೆಗಳು ಸಮಾಜವನ್ನು ಎಚ್ಚರಿಸುವ ಕೆಲಸ ಮಾಡುತ್ತಿವೆ. ಮಾಧ್ಯಮ ಪ್ರಜಾಪ್ರಭುತ್ವ ಕಾಯುವ ನಾಯಿಗಳು ಎಂಬ ಅಭಿಪ್ರಾಯ ಕೂಡ ಇದೆ. ಧರ್ಮವನ್ನು ರಾಜಕಾರಣಕ್ಕೆ ಒಳಪಡಿಸುತ್ತಿರುವುದರಿಂದ ಸಮಾಜದಲ್ಲಿ ಗಂಭೀರ ಪರಿಣಾಮ ಉಂಟಾಗಿದೆ. ಇದನ್ನು ಹೋಗಲಾಡಿಸಲು ಮಾಧ್ಯಮಗಳು ಆಳುವ ವರ್ಗವನ್ನು ಎಚ್ಚರಿಸುವ ಸಾಧನವಾಗಿ ಕೆಲಸ ಮಾಡಬೇಕಿದೆ ಎಂದು ಪ್ರತಿಪಾದಿಸಿದರು.
ಕವನ ಸಂಕಲನ ಕುರಿತು ಮಾತನಾಡಿದ ಬುಡಕಟ್ಟು ಜಾನಪದ ಸಂಶೋಧಕ ಡಾ.ಹನಿಯೂರು ಚಂದ್ರೇಗೌಡ ಮಾತನಾಡಿ, ಕಾವ್ಯ ವಿವಿಧ ಸಂದರ್ಭಗಳಲ್ಲಿ ಹುಟ್ಟಿತ್ತವೆ. ಕೋವಿಡ್ ಸಂದರ್ಭದಲ್ಲಿ ಉಂಟಾದ ಸಾವು-ನೋವು ನಮ್ಮನ್ನು ಗಂಭೀರವಾಗಿ ಕಾಡಿದೆ. ಅದರಂತೆ ಸಂತೆಕಸಲಗೆರೆ ಪ್ರಕಾಶ್ ಅವರ ನಾಲಿಗೆ ಸವೆದ ಕುರುಹುಗಳಿಲ್ಲ ಕವಿತೆಯಲ್ಲೂ ಕಂಡುಬರುತ್ತದೆ. ಹಣವಂತರು ಹಣವನ್ನು ಖರ್ಚು ಮಾಡುತ್ತಿಲ್ಲ. ಅದೇ ರೀತಿ ಗುಣವಂತರು ಸಹ ಗುಣವನ್ನು ಸಮಾಜಕ್ಕೆ ಅರ್ಪಿಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸಾಹಿತ್ಯ ಮತ್ತು ಮಾಧ್ಯಮಗಳು ಈ ಮನಸ್ಥಿತಿಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಸಾಹಿತ್ಯದ ಮೂಲ ಮೌಲ್ಯಗಳನ್ನು ಕಾಪಾಡುವ ಅಗತ್ಯತೆ ಇದೆ. ಸಂವೇಧನಾಶೀಲ, ಸೃಜನಶೀಲ ಸಾಹಿತ್ಯಗಳು ಮುನ್ನಲೆಗೆ ಬರಬೇಕಾಗಿದೆ. ರಾಜಪ್ರಭುತ್ವದಲ್ಲಿ ಪ್ರತಿಪಾದಿಸುತ್ತಿದ್ದ ಸಾಹಿತ್ಯದ ಧೋರಣೆಯಲ್ಲೇ ಸಾಹಿತ್ಯಗಳು ಹೊರ ಬರುವ ನಿಟ್ಟಿನಲ್ಲಿ ಒಂದು ಗುಂಪು ವ್ಯವಸ್ಥಿತ ಪಿತೂರಿ ನಡೆಸುತ್ತಿದೆ. ಇಂತಹ ಸಾಹಿತ್ಯದಿಂದ ಸಮಾಜವನ್ನು ಸರಿದಾರಿಗೆ ತರುವುದು ಅಸಾಧ್ಯ. ಸಾಹಿತ್ಯ ಸಮಕಾಲೀನದ ರೀತಿಯಲ್ಲಿ ಪ್ರತಿಪಾದನೆಯಾಗಬೇಕಿದೆ ಎಂದು ಹೇಳಿದರು.
ವಿಚಾರವಾದಿ ಡಾ.ಮಜ್ಜಿಗೆಪುರ ಶಿವರಾಂ, ಸಾಹಿತಿ ಸಂತೆಕಸಲಗೆರೆ ಪ್ರಕಾಶ್, ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ಮಂಗಲ ಎಂ. ಯೋಗೀಶ್ ಇತರರಿದ್ದರು.