ಜಿಲ್ಲೆ

ಜಾನಪದ ಕಲೆ ಉಳಿಯಲು ಪ್ರೋತ್ಸಾಹ ಅವಶ್ಯ: ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ ಅಭಿಮತ

reportermys

ಮಂಡ್ಯ: ಸರ್ಕಾರ ಜಾನಪದವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದರಷ್ಟೇ ಕಲೆಗಳು ಉಳಿಯಲು ಸಾಧ್ಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ ಅಭಿಪ್ರಾಯಪಟ್ಟರು.

ನಗರದ ಗಾಂಧಿಭವನದಲ್ಲಿ ಜಾನಪದ ಕಲಾವಿದರ ಒಕ್ಕೂಟದ ಮೈಸೂರು ವಿಭಾಗದಿಂದ ಆಯೋಜಿಸಿದ್ದ ಜಾನಪದ ಕಲಾ ಪ್ರದರ್ಶನ ಮತ್ತು ಆರ್.ಕೆ.ಸ್ವಾಮಿ ಅವರ ಜಾನಪದ ಕಲೆಗಳು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಕಲಾವಿದರನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಅದರಲ್ಲಿಯೂ ಜಾನಪದ ಕಲೆ ಉಳಿವಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಜಾನಪದ ಕಲಾವಿದರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಸಾಗಬೇಕು ಎಂದರು.

ಮಹಿಳಾ ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಕೆಂಪಮ್ಮ ಮಾತನಾಡಿ, ಪರಿಸರದಲ್ಲಿನ ಪ್ರಾಣಿ ಮತ್ತು ಪಕ್ಷಿಗಳ ಕಲರವ ಮುದ ನೀಡುತ್ತವೆ. ಅವುಗಳ ಆರಾಧನೆ ಮಾಡುವುದನ್ನು ಬೆಳೆಸಿಕೊಳ್ಳಬೇಕು. ಹಿಂದೆ ಆದಿಮಾನವರ ಜತೆಗೆ ಜೀವನ ಸಾಗಿಸುವಂತಹ ಸನ್ನಿವೇಶಗಳನ್ನು ನಾವು ಕೇಳಿದ್ದೇವೆ. ಕಲೆಗಳನ್ನು ಉಳಿಸುವುದರಿಂದ ಕಲಾ ಶ್ರೀಮಂತಿಕೆ ಉಳಿಸಿಕೊಳ್ಳಬಹುದು ಎಂದು ತಿಳಿಸಿದರು.

ಕಲಾವಿದ ಆರ್.ಕೆ.ಸ್ವಾಮಿ ಅವರು ಜಾನಪದ ಸೇರಿದಂತೆ ಕಲೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಸಾಗುತ್ತಿದ್ದಾರೆ. ಜಾನಪದ ಪುಸ್ತಕ ಹೊರತರುವ ಮೂಲಕ ಅದರ ಬೆಳೆವಣಿಗೆಗೆ ಸಾಕ್ಷಿಯಾಗಿದ್ದಾರೆ. ಅವರಿಗೆ ಎಲ್ಲರ ಪ್ರೋತ್ಸಾಹ ಹಾಗೂ ಸಹಕಾರ ಸಿಗಬೇಕು ಎಂದು ಮನವಿ ಮಾಡಿದರು.

ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವು, ಕಲಾವಿದರಾದ ಆರ್.ಕೆ.ಸ್ವಾಮಿ, ಎಸ್.ಸಿ.ಬಸವರಾಜು, ಮಹದೇವಸ್ವಾಮಿ, ಜಯಸಿಂಹ, ಮಹೇಶ್‌ಕುಮಾರ್, ಕೊತ್ತತ್ತಿ ರಾಜು, ನಂದಿನಿ ಇತರರಿದ್ದರು.