ಜಿಲ್ಲೆ

ಶಾಲಾ ಮಕ್ಕಳಿಗೆ ಪುಸ್ತಕ, ಕಲಿಕಾ ಸಾಮಗ್ರಿ ವಿತರಣೆ

ಸುನಿಲ್ ಪೊನ್ನೇಟಿ

ಕುಶಾಲನಗರ:

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ನಿರಂತರವಾಗಿ ಅಧ್ಯಯನಶೀಲತೆಯನ್ನು ಮೈಗೂಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿರವೀಂದ್ರ ಹೇಳಿದರು. ಸಮೀಪದ ತೊರೆನೂರು ಸರ್ಕಾರಿ ಪ್ರೌಢಶಾಲೆ ಮತ್ತು ಮದಲಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಮಕ್ಕಳಿಗೆ ಉಚಿತ ಪುಸ್ತಕ ಹಾಗೂ ಲೇಖನ ಸಾಮಾಗ್ರಿಗಳನ್ನು ವಿತರಣೆ ಸಮಾರಂಭದಲ್ಲಿ ಮಾತನಾಡಿದರು.

ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು. ಶಿಕ್ಷಣ ದಿಂದ ಮಾತ್ರ ಮುಂದಿನ ಭವಿಷ್ಯ ಉತ್ತಮ ಪಡಿಸಿಕೊಳ್ಳಲು ಸಾಧ್ಯ. ಕಳೆದ ಸುಮಾರು ಇಪ್ಪತ್ತನಾಲ್ಕು ವರ್ಷಗಳಿಂದ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುವ ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಲೇಖನ ಸಾಮಾಗ್ರಿ ಹಾಗೂ ಸಮವಸ್ತ್ರ ವಿತರಣೆ ಮಾಡುತ್ತ ಬರಲಾಗತ್ತಿದೆ. ಬಡ ಮಕ್ಕಳ ಶೈಕ್ಷಣಿಕ ಏಳಿಗೆಗಾಗಿ ಶ್ರಮಿಸಲಾಗುತ್ತಿದೆ. ಯಾವುದೇ ಫಲಾಪೇಕ್ಷೆಯ ನಿರೀಕ್ಷೆ ಮಾಡದೆ ಸಮಾಜ ಸೇವೆ ಮಾಡಬೇಕು ಎಂಬ ಉದ್ದೇಶದಿಂದ ಈ ಕಾರ್ಯ ಮಾಡಲಾಗುತ್ತಿದೆ. ಆರೋಗ್ಯವಂತ ಸಮಾಜ ಕಟ್ಟಬೇಕಾದರೆ ಅದು ಶಿಕ್ಷಕ ವರ್ಗದಿಂದ ಮಾತ್ರ ಸಾಧ್ಯ. ಮಕ್ಕಳು ಗುರು ಹಿರಿಯರಿಗೆ ಹಾಗೂ ಪೋಷಕರಿಗೆ ಗೌರವ ನೀಡುವ ಮೂಲಕ ಅವರ ಆಶೀರ್ವಾದ ಪಡೆಯಬೇಕು.

ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ, ಏಕಾಗ್ರತೆ ಹಾಗೂ ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸುಗಳಿಸಲು ಸಾಧ್ಯ. ಯಾವುದೇ ಕಾರಣಕ್ಕೂ ಹಿಂಜರಿಕೆ ಮನೋಭಾವ ಹೊಂದಬೇಡಿ. ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ, ಅಬ್ದುಲ್ ಕಲಾಂ ಸೇರಿದಂತೆ ಮಹಾನ್ ನಾಯಕರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡುವ ಮೂಡುವ ಮೂಲಕ ಅವರ ಆದರ್ಶ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಗ್ರಾಮದ ಮುಖಂಡ ನಿವೃತ್ತ ಅಧಿಕಾರಿ ರಾಜೇಗೌಡ ಮಾತನಾಡಿ, ಸಮಾಜ ಸೇವಕ ಹರಪಳ್ಳಿ ರವೀಂದ್ರ ಅವರು ಕಳೆದ ಅನೇಕ ವರ್ಷಗಳಿಗೆ ಬಡ ಮಕ್ಕಳಿಗೆ ಉಚಿತ ಪುಸ್ತಕ ನೀಡುವ ಮೂಲಕ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಇಂದಿನ ಸಮಾಜದಲ್ಲಿ ಸ್ವಾರ್ಥ ಮನೋಭಾವವನ್ನು ಹೊಂದಿರುವ ಜನರು ಇರುವಾಗ ಇಂತಹ ವ್ಯಕ್ತಿ ಸಮಾಜದಲ್ಲಿ ಆರ್ಥಿಕವಾಗಿ ಹಿಂದಿಳಿದ ಹಾಗೂ ನಿರ್ಲಕ್ಷ್ಯ ಒಳಗಾದ ವೃದ್ಧಾಪ್ಯರಿಗಾಗಿ ನೆರವು ನೀಡುತ್ತ ಬಂದಿದ್ದಾರೆ. ಇದೇ ರೀತಿ ಅವರಿಗೆ ಇನ್ನೂ ಹೆಚ್ಚಿನ ಶಕ್ತಿಯನ್ನು ಭಗವಂತ ನೀಡಲಿ. ಸಮಾಜದಲ್ಲಿ ತೊಂದರೆಗೆ ಒಳಗಾದವರಿಗೆ ನೆರವು ನೀಡುವುದರ ಜತೆಗೆ ಸಮಾಜ ಸೇವೆ ಮಾಡಲು ಅವಕಾಶ ಮಾಡಿಕೊಡುವಂತೆ ಆಗಲಿ ಎಂದು ಹಾರೈಸಿದರು.

ಮದಲಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎಂ. ರೇಣುಕಾ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಶಿಕ್ಷಕರಾದ ಕೆ. ಗಾಯಿತ್ರಿ, ವೀಣಾ, ಆರೀಫ ಬಾನು, ಸುಂದರ್, ಮಿಥುನ್, ಮಧುಸೂದನ್,

ತೊರೆನೂರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸುಷ್ಮಾ, ಮುಖ್ಯ ಶಿಕ್ಷಕ ಸತ್ಯನಾರಾಯಣ, ಶಿಕ್ಷಕರಾದ

ಸವಿತಾ, ಮಂಜುನಾಥ್, ದಿವ್ಯಾ, ಶೈಲಾ ಇದ್ದರು.

ಇದೇ ಸಂದರ್ಭದಲ್ಲಿ ಸಮಾಜ ಸೇವಕ ಹರಪಳ್ಳಿ ರವೀಂದ್ರ ಅವರನ್ನು ಶಾಲಾ ಆಡಳಿತ ಮಂಡಳಿ ಹಾಗೂ ಶಾಲಾ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.