ಕುಶಾಲನಗರ:
ಇಲ್ಲಿನ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ ಮಂಗಳವಾರ ನಡೆಯಿತು. ಸಮಾಜಸೇವಕ ಸೈಜನ್ ಕೆ.ಪೀಟರ್ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿದರು. ನಂತರ ಮಾತನಾಡಿದ ಅವರು, ಸರ್ಕಾರಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ನೋಟ್ ಬುಕ್ ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳು ಓದಿನ ಹವ್ಯಾಸ ಬೆಳೆಸಿಕೊಳ್ಳಬೇಕೆಂದರು.
ಅAಬೇಡ್ಕರ್ ಜನಪರ ವೇದಿಕೆಯ ತಾಲೂಕು ಅಧ್ಯಕ್ಷ ಎಸ್. ಆದಂ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕಲಿಕಾ ಸಮಯದಲ್ಲಿ ಮನಸ್ಸನ್ನು ಬೇರೆಡೆಗೆ ಹಾಯಿಸದೆ ಶ್ರದ್ಧೆ ಹಾಗೂ ಛಲದಿಂದ ವಿದ್ಯಾಭ್ಯಾಸ ಮಾಡಿದರೆ ಮಾತ್ರ ಉನ್ನತ ಮಟ್ಟದ ವ್ಯಾಸಂಗ ಮಾಡಲು ಸಾಧ್ಯವಾಗುತ್ತದೆ. ಸರ್ಕಾರಿ ಶಾಲೆ ಮಕ್ಕಳು ಶೈಕ್ಷಣಿಕವಾಗಿ ಬೆಳವಣಿಗೆ ಹೊಂದಲು ಶಿಕ್ಷಕರ ಜತೆ ದಾನಿಗಳೂ ಕೈ ಜೋಡಿಸಬೇಕು. ಆಗ ಮಾತ್ರ ಗ್ರಾಮೀಣ ಪ್ರದೇಶದ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ಹೇಳಿದರು.
ಶಾಲಾ ಮುಖ್ಯ ಶಿಕ್ಷಕಿ ಶಾಂತಲಾ ಮಾತನಾಡಿ, ವಿದ್ಯೆಯನ್ನು ಕಲಿತು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಉದ್ದೇಶದಿಂದ ವಿದ್ಯಾರ್ಥಿಗಳು ಶಾಲೆಗೆ ಬಂದರೆ ಮಾತ್ರ ಯಶಸ್ಸನ್ನು ಕಂಡುಕೊಳ್ಳಲು ಸಾಧ್ಯ ಮತ್ತು ವಿದ್ಯೆ ಕಲಿಸಿದ ಗುರುಗಳ ಶ್ರಮಕ್ಕೂ ದಾನಿಗಳು ನೀಡಿದ ನೆರವಿಗೆ ಬೆಲೆ ಬರುತ್ತದೆ ಎಂದರು.
ಈ ಸಂದರ್ಭ ಅಂಬೇಡ್ಕರ್ ಜನಪರ ವೇದಿಕೆಯ ಪ್ರಮುಖ ನಯಾಜ್, ಸಹ ಶಿಕ್ಷಕರಾದ ಜಂಶೀದ್ ಅಹಮ್ಮದ್ ಖಾನ್, ರಾಜೇಶ್ವರಿ, ದಿವ್ಯಶ್ರೀ, ಸುಲ್ತಾನ ಮತ್ತಿತರರು ಇದ್ದರು.