ಜಿಲ್ಲೆ

ಭಾಷೆಯ ಬೆಳವಣಿಗೆಯಲ್ಲಿ ಸಾಹಿತ್ಯದ ಪಾತ್ರ ದೊಡ್ಡದು

ಸುನಿಲ್ ಪೊನ್ನೇಟಿ

ಮಡಿಕೇರಿ:

ಭಾಷೆಯ ಬೆಳವಣಿಗೆಯಲ್ಲಿ ಸಾಹಿತ್ಯ ಮಹತ್ವಪೂರ್ಣ ಪಾತ್ರ ವಹಿಸುತ್ತದೆ ಎಂದು ಲೇಖಕಿ ಮತ್ತು ಕೊಡವ ಮಕ್ಕಡ ಕೂಟದ ಸಲಹೆಗಾರರಾದ ಐಚಂಡ ರಶ್ಮಿ ಮೇದಪ್ಪ ಹೇಳಿದರು. ಶನಿವಾರ ಇಲ್ಲಿನ ಪತ್ರಿಕಾಭವನದಲ್ಲಿ ನಡೆದ ಕೊಡವ ಮಕ್ಕಡ ಕೂಟದ 114ನೇ ಪುಸ್ತಕ, ಲೇಖಕಿ ಮಾಳೇಟಿರ ಸೀತಮ್ಮ ವಿವೇಕ್ ರಚಿತ 4ನೇ ಕೃತಿ "ಚೀತೆರ ಕಾಳ ಮುತ್ತ್ ಮಾಲೆ" ಕೊಡವ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಕಥೆ, ಕಾದಂಬರಿ, ನಾಟಕ, ಕವನ ಸಂಕಲನಗಳು ಸಾಹಿತ್ಯ ಕ್ಷೇತ್ರದ ಸುಂದರ ಮತ್ತು ಶಕ್ತಿಯುತ ಪ್ರಕಾರಗಳಾಗಿವೆ. ಕವನಗಳು ಭಾಷೆಯ ಬಲವನ್ನು ಹೆಚ್ಚಿಸುತ್ತವೆ, ಓದುಗರ ಜೊತೆ ಕವನ ಮಾತನಾಡುತ್ತದೆ, ಮನ ಮುಟ್ಟುತ್ತದೆ ಮತ್ತು ಹೊಸ ಆಯಾಮಗಳಿಗೆ ಕೊಂಡೊಯ್ಯುತ್ತದೆ. ಹಲವು ಪುಸ್ತಕಗಳನ್ನು ರಚಿಸಿರುವ ಲೇಖಕಿ ಮಾಳೇಟಿರ ಸೀತಮ್ಮ ಅವರ ಸಾಹಿತ್ಯ ಸೇವೆ ನಿರಂತರವಾಗಿರಲಿ, ಮತ್ತಷ್ಟು ಕೃತಿ ಹೊರ ಬರಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ, ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ, ಸಾಹಿತ್ಯ ಬೆಳವಣಿಗೆಯ ಮೇಲಿನ ಆಸಕ್ತಿಯಿಂದ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಕೊಡವ ಮಕ್ಕಡ ಕೂಟ ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ.

ಸರ್ಕಾರದ ಅನುದಾನವಿಲ್ಲದಿದ್ದರೂ ಸಾಹಿತ್ಯ ಬೆಳವಣಿಗೆಗೆ ಒತ್ತು ನೀಡುವ ನಿಟ್ಟಿನಲ್ಲಿ ದಾನಿಗಳ ಸಹಕಾರದಿಂದ ಜಿಲ್ಲೆಯ ಹಲವು ಬರಹಗಾರರು ಬರೆದ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಹಲವು ಕೃತಿಗಳನ್ನು ಬಿಡುಗಡೆ ಮಾಡಲಾಗಿದೆ. ಕೂಟದ ಹಲವು ಪುಸ್ತಕಗಳಿಗೆ ಪ್ರಶಸ್ತಿಗಳು ಲಭಿಸಿದೆ. ಇನ್ನು ಮುಂದೆಯೂ ಕೂಡ ಬರಹಗಾರರಿಗೆ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಲಾಗುವುದು.

ಮಾಳೇಟಿರ ಸೀತಮ್ಮ ಉತ್ತಮ ಬರಹಗಾರರಾಗಿದ್ದು, ಕೊಡವ ಸಂಸ್ಕೃತಿ, ಆಚಾರ ವಿಚಾರ ಹಾಗೂ ಕೆಲವು ವ್ಯಕ್ತಿಗಳ ಪರಿಚಯವನ್ನು ಕವನದ ಮೂಲಕ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಮತ್ತಷ್ಟು ಕೊಡುಗೆ ನೀಡುವಂತಾಗಲಿ ಎಂದರು.

"ಚೀತೆರ ಕಾಳ ಮುತ್ತ್ ಮಾಲೆ" ಕೊಡವ ಕವನ ಸಂಕಲನದ ಲೇಖಕಿ ಮಾಳೇಟಿರ ಸೀತಮ್ಮ ವಿವೇಕ್ ಮಾತನಾಡಿ, ಪುಸ್ತಕವು 50 ಕವನಗಳನ್ನು ಒಳಗೊಂಡಿದ್ದು, ಸುಮಾರು ಐದು ವರ್ಷಗಳ ದಾಖಲೆಗಳ ಕವನಗಳಾಗಿವೆ. ಅಲ್ಲದೇ ಅಧ್ಯಯನದ ಸಂದರ್ಭ ಸಿಕ್ಕ ಕೆಲವು ವಿಚಾರಗಳನ್ನು ಕವನ ರೂಪದಲ್ಲಿ ಹೊರತರಲಾಗಿದೆ. ಈ ಕವನಗಳಲ್ಲಿ ಹಲವು ನೀತಿ ಪಾಠಗಳಿದ್ದು, ತಾಳವಿಲ್ಲ, ಅಂತ್ಯಪ್ರಾಸ ನೀಡಲಾಗಿದೆ ಎಂದು ಹೇಳಿದರು.

ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಕಂಬೀರAಡ ಕಿಟ್ಟು ಕಾಳಪ್ಪ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಈ ಪುಸ್ತಕ ಆಪ್ತತೆಯನ್ನು ಮೂಡಿಸುತ್ತದೆ. ಕಾವ್ಯಾಸಕ್ತಿ ಬೆಳೆಸಿಕೊಂಡು ಭಾವನೆಗಳಿಗೆ ಅಕ್ಷರ ರೂಪ ನೀಡಿ ಕವನ ಸಂಕಲನ ಹೊರ ತಂದಿರುವುದು ಹೆಮ್ಮೆ ಎನಿಸಿದೆ. ಕೊಡವ ಮಕ್ಕಡ ಕೂಟ ಹಲವು ಬರಹಗಾರರಿಗೆ ಪ್ರೋತ್ಸಾಹ ನೀಡುವ ಮೂಲಕ ಕೊಡವರ ಬಗ್ಗೆ ಉತ್ತಮ ಕಾಳಜಿ ವಹಿಸಿ ಕೆಲಸ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಲೇಖಕಿಯ ತಾಯಿ ಕಂಬೀರAಡ ಮುತ್ತಮ್ಮ ಹಾಗೂ ಸಮಾಜ ಸೇವಕ ಹಂಚೆಟ್ಟಿರ ಮನು ಮುದ್ದಪ್ಪ ಇದ್ದರು.