ಮಂಗಳೂರು: ಅಸೌಖ್ಯದಿಂದಿರುವ ವೃದ್ಧ ಬಡ ದಂಪತಿ, ಮುರಿದು ಬೀಳಬಹುದಾದ ಮನೆಯ ಮಾಡು, ಸರಿಪಡಿಸಲು ಅಡ್ಡಿಯಾದ ಮನೆಯ ಗೋಡೆಗೆ ಅಳವಡಿಸಿದ ವಿದ್ಯುತ್ ಕಂಬ.
ಇದು ಬೋಂದೆಲ್ ಚರ್ಚ್ ಹಿಂಬದಿ ಭಟ್ರಕೋಡಿ ಎಂಬಲ್ಲಿರುವ ಮರಿಗೌಡ (76) ಹಾಗೂ ಕಮಲಾ (65) ದಂಪತಿಯ ಮನೆಯ ದುಸ್ಥಿತಿ. ಈ ಕುಟುಂಬ ಸುಮಾರು 50 ವರ್ಷಗಳಿಂದ ಇಲ್ಲಿ ಒಂದೂವರೆ ಸೆಂಟ್ಸ್ ಜಾಗದಲ್ಲಿ ಸಣ್ಣದಾದ ಮನೆಯೊಂದರಲ್ಲಿ ವಾಸವಿದೆ. ವೃದ್ಧರಿಬ್ಬರೂ ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಹೆಣ್ಣು ಮಕ್ಕಳ ಆಸರೆಯಲ್ಲಿ ದಿನ ಕಳೆಯುತ್ತಿದ್ದಾರೆ.
ಮನೆಯ ಪಕ್ಕಾಸುಗಳು ಹಾಳಾಗಿದ್ದು, ಮಳೆಗಾಲದಲ್ಲಿ ಮಾಡು ಮುರಿದು ಬೀಳುವ ಸ್ಥಿತಿಯಲ್ಲಿದೆ. ಅದನ್ನು ಸರಿಪಡಿಸಲು ಸ್ಥಳೀಯ ಪೃಥ್ವಿ ಚಾರಿಟೇಬಲ್ ಟ್ರಸ್ಟ್ ಹಾಗೂ ಮೂಲತ್ವ ಫೌಂಡೇಶನ್ ಆಸಕ್ತಿ ವಹಿಸಿದ್ದು, ಗೋಡೆಗೆ ಅಳವಡಿಸಿದ ವಿದ್ಯುತ್ ಕಂಬ ಸಮಸ್ಯೆಯಾಗಿದೆ. ಕೆಲಸ ಮಾಡುವಾಗ ವಿದ್ಯುತ್ ತಂತಿಗೆ ತಾಗಿದರೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಇಲ್ಲಿ ಕೆಲಸ ಮಾಡುವುದು ಅಪಾಯಕಾರಿಯಾಗಿದೆ.
ಕಳೆದ 30 ವರ್ಷಗಳಿಂದ ವಿದ್ಯುತ್ ಕಂಬ ಮನೆಯ ಗೋಡೆಯಲ್ಲಿದೆ. ಮಳೆಗಾಲದಲ್ಲಿ ಮಿಂಚು, ಸಿಡಿಲು ಬರುವಾಗ ಭಯವಾಗುತ್ತದೆ. ಕಂಬವನ್ನು ಸ್ಥಳಾಂತರಿಸುವಂತೆ ಹಲವು ಬಾರಿ ಸಂಬಂಧಪಟ್ಟವರಲ್ಲಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸುತ್ತ ಮುತ್ತ ಬೇರೆಯವರ ಜಾಗವಾದ ಕಾರಣ ಅವರ ಜಾಗದಲ್ಲಿ ಕಂಬ ಅಳವಡಿಸಲು ಒಪ್ಪುವುದಿಲ್ಲ. ಹೆಣ್ಣು ಮಗಳ ಜತೆ ಬಹಳ ಕಷ್ಟದಿಂದ ಜೀವ ಭಯದಲ್ಲಿ ವಾಸ ಮಾಡುತ್ತಿದ್ದೇವೆ ಎಂದು ಕಮಲಾ ವಿಜಯವಾಣಿಗೆ ತಿಳಿಸಿದ್ದಾರೆ.
ಸಂಬಂಧಪಟ್ಟವರ ಸ್ಪಂದನೆ ಇಲ್ಲ
ಭಟ್ರಕೋಡಿಯಲ್ಲಿ ನೀರು, ದಾರಿದೀಪ ಮೊದಲಾದ ಮೂಲಭೂತ ಸಮಸ್ಯೆಗಳಿವೆ. ಇಲ್ಲಿ ನೀರಿನ ಪೈಪ್ ಒಡೆದು ಹೋಗಿ ಹಲವು ದಿನಗಳಾದರೂ ಅದನ್ನು ಸರಿಪಡಿಸಿಲ್ಲ. ದಾರಿದೀಪ ಕೆಟ್ಟು ಹೋಗಿ ತಿಂಗಳಾದರೂ ಸರಿಪಡಿಸಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಚುನಾವಣೆ ಸಂದರ್ಭ ಬಿಟ್ಟು ಈ ಕಡೆಗೆ ಭೇಟಿ ನೀಡುವುದೇ ಇಲ್ಲ ಎಂದು ಕಮಲಾ ಆರೋಪಿಸಿದರು.
ಪೃಥ್ವಿ ಚಾರಿಟೇಬಲ್ ಟ್ರಸ್ಟ್ ಹಾಗೂ ಮೂಲತ್ವ ಫೌಂಡೇಶನ್ ಜತೆಗೂಡಿ ಬಡ ದಂಪತಿಯ ಮನೆ ರಿಪೇರಿ ಮಾಡಿ ಕೊಡಲು ಇಚ್ಚಿಸಿದ್ದು, ಆದರೆ ಗೋಡೆಯಲ್ಲಿ ವಿದ್ಯುತ್ ಕಂಬ ಇರುವುದರಿಂದ ಕೆಲಸ ಮಾಡಲು ಕಷ್ಟವಾಗಿದೆ. ಮೆಸ್ಕಾಂ ತಕ್ಷಣ ಸ್ಪಂದಿಸಿ ಕಂಬ ತೆರವು ಮಾಡಿಕೊಡಬೇಕು.
ಲೋಲಾಕ್ಷಿ
ಅಧ್ಯಕ್ಷೆ ಪೃಥ್ವಿ ಚಾರಿಟೇಬಲ್ ಟ್ರಸ್ಟ್
ಮನೆಯ ಗೋಡೆಗೆ ತಾಗಿಕೊಂಡು ವಿದ್ಯುತ್ ಕಂಬವನ್ನು ತೆಗೆಯಲು ಸಿಬ್ಬಂದಿ ಜತೆ ಸ್ಥಳ ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು.
ಮಂಜುನಾಥ್
ಸಹಾಯಕ ಅಭಿಯಂತರ ಮೆಸ್ಕಾಂ ಕಾವೂರು